
ಬಾಲನ್ಯಾಯ ಕಾಯ್ದೆ 2015 ರ ಸೆಕ್ಷನ್ 81 ರನ್ವಯ ಯಾವುದೇ ವ್ಯಕ್ತಿ ಪೋಷಕರನ್ನು ಕಳೆದುಕೊಂಡ, ತಿರಸ್ಕರಿಸಲ್ಪಟ್ಟ, ತ್ಯಜಿಸಲ್ಪಟ್ಟ ಮಗುವನ್ನು ಅನಧಿಕೃತವಾಗಿ ದತ್ತು ನೀಡುವುದು ಅಥವಾ ದತ್ತು ಪಡೆಯುವುದು ಮಾಡಿದಲ್ಲಿ ಅಂತಹ ವ್ಯಕ್ತಿಗೆ ಐದು ವರ್ಷಗಳ ಅವಧಿಯವರೆಗೆ ಕಠಿಣ ಕಾರಾಗೃಹ ಶಿಕ್ಷೆ ಮತ್ತು ಒಂದು ಲಕ್ಷ ರೂ.ವರೆಗೆ ದಂಡ ವಿಧಿಸಬಹುದು.
ಒಂದು ವೇಳೆ ಇಂತಹ ಅಪರಾಧಗಳಲ್ಲಿ ಯಾವುದೇ ಆಸ್ಪತ್ರೆ, ನರ್ಸಿಂಗ್ ಹೋಮಿನ ಅಥವಾ ಹೆರಿಗೆ ಕೇಂದ್ರದ ಸಿಬ್ಬಂದಿಗಳು ಶಾಮೀಲಾಗಿದ್ದರೆ ಶಿಕ್ಷೆಯ ಅವಧಿ ಮೂರು ವರ್ಷಗಳಿಗೆ ಕಡಿಮೆ ಇಲ್ಲದಂತೆ ಏಳು ವರ್ಷಗಳ ಅವಧಿಯವರೆಗೆ ವಿಸ್ತರಿಸಬಹುದಾಗಿದೆ. ಅನಾಥ, ಪರಿತ್ಯಕ್ತ ಮಕ್ಕಳು ಕಂಡು ಬಂದಲ್ಲಿ ಹಾಗೂ ಮಗುವನ್ನು ದತ್ತು ಪಡೆಯಲು ಇಚ್ಚಿಸುವ ಪೋಷಕರು ಮಡಿಲು ಸರ್ಕಾರಿ ವಿಶೇಷ ದತ್ತು ಸಂಸ್ಥೆ ಹಾಗೂ ದತ್ತು ಮಾರ್ಗದರ್ಶನ ಕೇಂದ್ರ, ಸರ್ಕಾರಿ ಬಾಲಕಿಯರ ಬಾಲಮಂದಿರದ ಆವರಣ, ಮುಳಿಯ ಲೇಔಟ್, ಎಫ್ಎಂಕೆಎಂಸಿ. ಕಾಲೇಜು ಹತ್ತಿರ, ಮಡಿಕೇರಿ ದೂ.ಸಂ.08272-200450 ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅವರು ತಿಳಿಸಿದ್ದಾರೆ.