ಬೆಂಗಳೂರು: ಬೆಂಗಳೂರಿನಲ್ಲಿ ಮಕ್ಕಳ ಮಾರಾಟ ದಂಧೆಯಲ್ಲಿ ತೊಡಗಿದ್ದ ಎಂಟು ಮಂದಿಯನ್ನು ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ಗೋಮತಿ, ರಾಧಾಮಣಿ, ಸಹಶಿನಿ ಮತ್ತು ಮಹಾಲಕ್ಷ್ಮಿ ಎಂದು ಗುರುತಿಸಲಾಗಿದೆ. ಈ ಹಿಂದೆ ರಾಜರಾಜೇಶ್ವರಿ ನಗರದಲ್ಲಿ ನವಜಾತ ಶಿಶುವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ನಾಲ್ವರನ್ನು ಬಂಧಿಸಲಾಗಿತ್ತು.
ಕರ್ನಾಟಕ ಮೂಲದ ಮಹಾಲಕ್ಷ್ಮಿ ಈ ಪ್ರಕರಣದ ಪ್ರಮುಖ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ. ಮಕ್ಕಳಿಲ್ಲದ ದಂಪತಿಗಳನ್ನು ಗುರಿಯಾಗಿಸಿಕೊಂಡು ನವಜಾತ ಶಿಶುಗಳನ್ನು ಮಾರಾಟ ಮಾಡುತ್ತಿದ್ದರು ಎಂದು ಬೆಂಗಳೂರು ಪೊಲೀಸ್ ಆಯುಕ್ತ ಬಿ.ದಯಾನಂದ ತಿಳಿಸಿದ್ದಾರೆ.
ಮಗು ಹೊಟ್ಟೆಯಲ್ಲಿ ಇರುವಾಗಲೇ ಬುಕಿಂಗ್
ಈ ದಂಧೆ ಎಷ್ಟು ಭಯಾನಕವಾಗಿತ್ತೆಂದರೆ ಮಗು ಹೊಟ್ಟೆಯಲ್ಲಿ ಇರುವಾಗಲೇ ಬುಕಿಂಗ್ ಮಾಡಲಾಗುತ್ತಿತ್ತು. ಮಕ್ಕಳು ಹುಟ್ಟುವ ಮೊದಲೇ ಅಥವಾ ಗರ್ಭ ಧರಿಸುವ ಮೊದಲೇ ಡೀಲ್ ಕುದುರಿಸಲಾಗುತ್ತಿತ್ತಂತೆ. ಚಿಕ್ಕ ವಯಸ್ಸಿನಲ್ಲಿ ಮದುವೆಯಾಗಿ ಮಗು ಹೆರಲು ಬಯಸದ ಹೆಣ್ಣು ಮಕ್ಕಳು ಹಾಗೂ ಬಡಕುಟುಂಬದ ಹೆಣ್ಣು ಮಕ್ಕಳನ್ನು ಟಾರ್ಗೆಟ್ ಮಾಡಲಾಗುತ್ತಿತ್ತು. ಅಲ್ಲದೇ ಆರೋಪಿಗಳು ಪ್ರತಿಷ್ಠಿತ ಆಸ್ಪತ್ರೆಗಳ ವೈದ್ಯರನ್ನು ಕೂಡಾ ತಮ್ಮ ಬುಟ್ಟಿಗೆ ಹಾಕಿಕೊಂಡು ಐವಿಎಫ್ ಮತ್ತಿತರ ಕೃತಕ ಗರ್ಭಧಾರಣಾ ವಿಧಾನಗಳ ಮೂಲಕವೂ ಮಕ್ಕಳನ್ನು ಸೃಷ್ಟಿಸಿ ಮಾರಾಟ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಬಡ ಮಹಿಳೆಯರನ್ನು ಗರ್ಭಧರಿಸಲು ಮನವೊಲಿಸಿ ಆರೋಪಿಗಳು ಬಡ ಗರ್ಭಿಣಿಯರಿಂದ ಶಿಶುಗಳನ್ನು ಖರೀದಿಸಿ ನವಜಾತ ಶಿಶುಗಳನ್ನು 8 ರಿಂದ 10 ಲಕ್ಷ ರೂ.ಗೆ ಮಾರಾಟ ಮಾಡುತ್ತಿದ್ದರು. ಮಕ್ಕಳನ್ನು ಖರೀದಿಸಿದ ಜನರಿಗೆ ನಕಲಿ ಜನನ ಪ್ರಮಾಣಪತ್ರಗಳು ಮತ್ತು ಇತರ ದಾಖಲೆಗಳನ್ನು ರಚಿಸಿ ಕೊಡುತ್ತಿದ್ದರು.ಆರೋಪಿಗಳಲ್ಲಿ ಹೆಚ್ಚಿನವರು ತಮಿಳುನಾಡು ಮೂಲದವರು. ನವಜಾತ ಶಿಶುಗಳನ್ನು ಮಾರಾಟ ಮಾಡಲು ಗುಂಪಿಗೆ ಸಹಾಯ ಮಾಡುವಲ್ಲಿ ತಮಿಳುನಾಡಿನ ನಾಲ್ಕು ಆಸ್ಪತ್ರೆಗಳು ಮತ್ತು ಕೆಲವು ವೈದ್ಯರು ಭಾಗಿಯಾಗಿದ್ದಾರೆ ಎಂದು ಶಂಕಿಸಲಾಗಿದೆ.