ಬೆಂಗಳೂರು : ಬಗರ್ ಹುಕುಂ ಯೋಜನೆಗೆ ನಕಲಿ ಅರ್ಜಿ ಸಲ್ಲಿಸಿದವರಿಗೆ ರಾಜ್ಯ ಸರ್ಕಾರವು ಬಿಗ್ ಶಾಕ್ ನೀಡಿದ್ದು, ಸರ್ಕಾರಿ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ಭೂರಹಿತರಿಗೆ ಭೂಮಿಯನ್ನು ಸಕ್ರಮಗೊಳಿಸಲು ಸಲ್ಲಿಕೆಯಾಗಿರುವ ನಕಲಿ ಅರ್ಜಿಗಳನ್ನು ಪತ್ತೆ ಹಚ್ಚಲು ಕಂದಾಯ ಇಲಾಖೆ ಪ್ರಕ್ರಿಯೆ ಆರಂಭಿಸಿದೆ.
ಈ ಕುರಿತು ಸಚಿವ ಕೃಷ್ಣ ಬೈರೇಗೌಡ ಮಾಹಿತಿ ನೀಡಿದ್ದು, ಅಕ್ರಮ-ಸಕ್ರಮ ಅರ್ಜಿಗಳ ಶೀಘ್ರ ವಿಲೇವಾರಿ ನಮ್ಮ ಆದ್ಯತೆಯ ಕಾರ್ಯಕ್ರಮ. ಬಗರ್ ಹುಕುಂ ಅಡಿ 9,29,512 ಅರ್ಜಿಗಳು ಸಲ್ಲಿಕೆಯಾಗಿದ್ದು, ಭೂ ರಹಿತರಿಗೆ ಹಾಗೂ ಅರ್ಹ ಬಡವರಿಗೆ ಸರ್ಕಾರಿ ಜಮೀನನ್ನು ನ್ಯಾಯಸಮ್ಮತವಾಗಿ ತಲುಪಿಸುವುದೇ ನಮ್ಮ ಕರ್ತವ್ಯ ಎಂದು ಹೇಳಿದ್ದಾರೆ.
ಅರ್ಜಿದಾರರು ಭೂಮಿಯನ್ನು ಪಡೆಯಲು ಅರ್ಹರೇ ಎಂದು ತಿಳಿಯಲು ಕಡ್ಡಾಯವಾಗಿ ಅರ್ಜಿಗೆ ಆಧಾರ್ ಲಿಂಕ್ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅರ್ಜಿ ಸಲ್ಲಿಸಿರುವವರಲ್ಲಿ ಹೆಚ್ಚಿನ ಸಂಖ್ಯೆಯ ಜನರು ಅರ್ಹರಲ್ಲ, 2017ರಲ್ಲಿ, ನಾವು ಕಾನೂನನ್ನು ತಿದ್ದುಪಡಿ ಮಾಡಿದ್ದೇವೆ ಮತ್ತು ಸರ್ಕಾರಿ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ಭೂರಹಿತರಿಗೆ ಭೂಮಿಯನ್ನು ಸಕ್ರಮಗೊಳಿಸಲು ಮುಂದಾಗಿದ್ದೇವೆ. ಇದರ ಅಡಿಯಲ್ಲಿ 54 ಲಕ್ಷ ಎಕರೆ ಭೂಮಿಗೆ ಹಕ್ಕುಪತ್ರ ನೀಡುವ 9.29 ಲಕ್ಷ ಅರ್ಜಿಗಳು ರಾಜ್ಯ ಸರ್ಕಾರದ ಮುಂದೆ ಬಾಕಿ ಉಳಿದಿವೆ. ಈ ಅರ್ಜಿಗಳನ್ನು ವಿಲೇವಾರಿ ಮಾಡುವುದು ನಮ್ಮ ಆದ್ಯತೆಯಾಗಿದೆ ಎಂದು ತಿಳಿಸಿದ್ದಾರೆ.