‘ಆರೋಗ್ಯ ವಿಮೆ’ ಹೊಂದಿದವರಿಗೆ ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎಐ) ಸಿಹಿ ಸುದ್ದಿ ಒಂದನ್ನು ನೀಡಿದೆ. ಶೀಘ್ರದಲ್ಲೇ ಸಂಪೂರ್ಣ ನಗದು ರಹಿತ ಪಾವತಿ ವ್ಯವಸ್ಥೆಯನ್ನು ಜಾರಿಗೆ ತರಲು ವಿಮಾ ಕಂಪನಿಗಳ ಜೊತೆ ಕೆಲಸ ಮಾಡುತ್ತಿರುವುದಾಗಿ ಐಆರ್‌ಡಿಎಐ ಅಧ್ಯಕ್ಷ ದೇಬಶಿಶ್ ಪಂಡಾ ತಿಳಿಸಿದ್ದಾರೆ.
ಮುಂಬೈನಲ್ಲಿ ನಡೆದ ಜಾಗತಿಕ ಫಿನ್ ಟೆಕ್ ಉತ್ಸವವನ್ನು ಉದ್ದೇಶಿಸಿ ಮಾತನಾಡಿದ ದೇಬಶಿಶ್ ಪಂಡಾ, ಪ್ರಸ್ತುತ ನಗದು ರಹಿತ ಪಾವತಿ ವ್ಯವಸ್ಥೆ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ವಿಮಾ ಕಂಪನಿಗಳು ಒಟ್ಟು ಬಿಲ್ ಮೊತ್ತದಲ್ಲಿ ಶೇ.10ರಷ್ಟು ಕಡಿತ ಮಾಡುತ್ತಿದ್ದು, ಅಲ್ಲದೆ ನಗದು ರಹಿತ ಸೌಲಭ್ಯ ವ್ಯವಸ್ಥೆ ಇದ್ದರೂ ಸಹ ಹಲವು ಆಸ್ಪತ್ರೆಗಳು ರೋಗಿಗಳನ್ನು ದಾಖಲು ಮಾಡಿಕೊಳ್ಳುವಾಗ ಈ ಸೌಲಭ್ಯವನ್ನು ನೀಡುತ್ತಿಲ್ಲ ಎಂದು ಹೇಳಿದ್ದಾರೆ.
ಹೀಗಾಗಿ ವೈದ್ಯಕೀಯ ವಿಮೆ ಮೊತ್ತ ಸಂಪೂರ್ಣವಾಗಿ ನಗದು ರಹಿತವಾಗಿ ಆಸ್ಪತ್ರೆಗಳಿಗೆ ಪಾವತಿಯಾಗುವಂತೆ ಮಾಡುವ ಸಲುವಾಗಿ ಆರೋಗ್ಯ ವಿಮಾ ಕಂಪನಿಗಳು, ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ ಮತ್ತು ವಿಮಾ ಮಂಡಳಿಯ ಜೊತೆ ಐಆರ್‌ಡಿಎಐ ಕೆಲಸ ಮಾಡುತ್ತಿದ್ದು, ಇದರ ಜೊತೆಗೆ ನಗದುರಹಿತ ಪಾವತಿ ಸೌಲಭ್ಯಕ್ಕಾಗಿ ರಾಷ್ಟ್ರೀಯ ಆರೋಗ್ಯ ವಿನಿಮಯ ಕೇಂದ್ರಕ್ಕೆ ಮತ್ತಷ್ಟು ಆಸ್ಪತ್ರೆಗಳನ್ನು ಸೇರಿಸಲು ಕಾರ್ಯನಿರ್ವಹಿಸಲಾಗುತ್ತಿದೆ ಎಂದಿದ್ದಾರೆ.