ಬೆಂಗಳೂರು: ಬಿಜೆಪಿಯವರು ಮೊದಲಿನಿಂದಲೂ ಇತಿಹಾಸ ತಿರುಚಲು ಯತ್ನಿಸುತ್ತಿದ್ದಾರೆ. ಕುವೆಂಪು, ಬಸವಣ್ಣ, ನಾರಾಯಣ ಗುರು, ಅಂಬೇಡ್ಕರ್, ಶ್ರೀ ಬಾಲಗಂಗಾಧರ ಸ್ವಾಮಿಜಿ, ಶ್ರೀ ಶಿವಕುಮಾರ ಸ್ವಾಮೀಜಿ ಹೀಗೆ ಯಾರನ್ನೂ ಬಿಡದೇ ಇತಿಹಾಸ ತಿರುಚುತ್ತಿದ್ದಾರೆ. ಈಗ ಉರಿಗೌಡ, ನಂಜೇಗೌಡರ ಹೆಸರು ತೆಗೆದುಕೊಂಡಿದ್ದಾರೆ. ಇವರ ಇತಿಹಾಸ ಎಲ್ಲಿದೆ? ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮಕ್ಕೆ ಮಂಡ್ಯದಲ್ಲಿ ಇತಿಹಾಸ ತಿರುಚಲು ಅವಕಾಶ ಕೊಟ್ಟಿದ್ದು ಯಾರು? ಉರಿಗೌಡ, ನಂಜೇಗೌಡ ದ್ವಾರ ನಿರ್ಮಾಣಕ್ಕೆ ಅವಕಾಶ ಕಲ್ಪಿಸಿರುವ ಡಿಜಿಪಿ ಪ್ರವೀಣ್ ಸೂದ್ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ಆಗ್ರಹಿಸಿದರು.
ನಾನು ಡಿಜೆಪಿ ಪ್ರವೀಣ್ ಸೂದ್ ನಿಷ್ಪಕ್ಷಪಾತ ವ್ಯಕ್ತಿ ಅಂದುಕೊಂಡಿದ್ದೆ. ಆದರೆ ಬಿಜೆಪಿಯ ಬಾಲಬಡುಕರಾಗಿ ಕೆಲಸ ಮಾಡುತ್ತಿದ್ದಾರೆ. ಆ ದ್ವಾರ ನಿರ್ಮಾಣಕ್ಕೆ ಇವರು ಹೇಗೆ ಅನುಮತಿ ಕೊಟ್ಟರು? ಬಿಜೆಪಿಯವರು ಜಾತಿ, ಜಾತಿ ಮಧ್ಯೆ ವಿಷಬೀಜ ಬಿತ್ತಿ ಚುನಾವಣೆ ಸಮೀಪಿಸುವಾಗ ಜನರನ್ನು ದಾರಿ ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ. ಉರಿಗೌಡ, ನಂಜೇಗೌಡ ಹೆಸರಲ್ಲಿ ದ್ವಾರ ಮಾಡುವಂತೆ ಯಾರು ಕೇಳಿದ್ದರು? ಇವರು ಇದ್ದರು ಎಂಬುದಕ್ಕೆ ಎಲ್ಲಾದರೂ ದಾಖಲೆಗಳಿವೆಯೇ? ಡಿಜಿಪಿ ಸರ್ಕಾರದ ಮಾತು ಕೇಳಿಕೊಂಡು ಇದಕ್ಕೆ ಅವಕಾಶ ನೀಡಿದ್ದಾರೆ. ಇದು ಎಷ್ಟು ಸರಿ ಮೊದಲು ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಗುಡುಗಿದರು.