ಬಳ್ಳಾರಿ: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಆಡಳಿತ ಹಾಗೂ ವಿಪಕ್ಷ ನಾಯಕರ ಪರಸ್ಪರ ವಾಕ್ಸಮರ ತಾರಕಕ್ಕೇರಿದ್ದು, ಟೀಕಿಸುವ ಭರದಲ್ಲಿ ನಾಲಿಗೆ ಹರಿ ಬಿಡುತ್ತಿದ್ದಾರೆ. ಸಿಎಂ ಬಸವರಾಜ್ ಬೊಮ್ಮಾಯಿ ವಿರುದ್ಧ ವಾಗ್ದಾಳಿ ನಡೆಸುವ ಭರದಲ್ಲಿ ’ಸಿಎಂ ಬೊಮ್ಮಾಯಿ ಮೋದಿ ಮುಂದೆ ನಾಯಿಮರಿ ಅಂತೆ ಇರ್ತಾರೆ’ ಎಂದು ಹೇಳಿಕೆ ನೀಡಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ನಾಯಕರು ಮುಗಿಬಿದ್ದಿದ್ದಾರೆ.
ಸಿದ್ದರಾಮಯ್ಯ ಹೇಳಿಕೆಗೆ ಕಿಡಿಕಾರಿರುವ ಸಾರಿಗೆ ಸಚಿವ ಶ್ರೀರಾಮುಲು, ಮುಖ್ಯಮಂತ್ರಿಗಳನ್ನು ನಾಯಿಮರಿಗೆ ಹೋಲಿಕೆ ಮಾಡುವುದು ಎಷ್ಟು ಸರಿ ? ಓರ್ವ ಮಾಜಿ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯನವರು ಸಿಎಂ ಬಗ್ಗೆ ಈ ರೀತಿ ಲಘುವಾಗಿ ಮಾತನಾಡಿದ್ದು ಸರಿಯಲ್ಲ, ತಕ್ಷಣ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.
ನಾನೂ ಕೂಡ ಸಿದ್ದರಾಮಯ್ಯ ಬಗ್ಗೆ ಲಘುವಾಗಿ ಮಾತನಾಡಬಹುದು. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಸೋನಿಯಾ ಗಾಂಧಿ ಮನೆಯಲ್ಲಿ ಇಲಿ, ಬೆಕ್ಕಿನ ರೀತಿ ಇರ್ತಿದ್ದರು. ಸಿದ್ದರಾಮಯ್ಯ ಜಿರಳೆ ರೀತಿ ಇರ್ತಾರೆ ಎಂದು ನಾನೂ ಹೇಳಬಹುದು ಆದರೆ ನಾನು ಹೇಳಲ್ಲ, ಹಾಗೆ ಲಘುವಾಗಿ ಮಾತನಾಡುವುದು ನಮ್ಮ ಸಂಸ್ಕಾರ, ಸಂಸ್ಕೃತಿ ಅಲ್ಲ. ಗಣ್ಯರ ಬಗ್ಗೆ ಲಘುವಾಗಿ ಮಾತನಾಡುವುದು ಕಾಂಗ್ರೆಸ್ ಸಂಸ್ಕೃತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಗರಿಬೊಮ್ಮನಹಳ್ಳಿಯಲ್ಲಿ ಮಾತನಾಡಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ, ಸಿಎಂ ಬೊಮ್ಮಾಯಿ ಅವರಿಗೆ ಧೈರ್ಯವಿದ್ದರೆ ಅಭಿವೃದ್ಧಿ ಬಗ್ಗೆ ಚರ್ಚೆಗೆ ಬರಲಿ. ಕಾಂಗ್ರೆಸ್ ನವರ ಧಮ್ ಬಗ್ಗೆ ಸಿಎಂ ಬೊಮ್ಮಾಯಿ ಪ್ರಶ್ನೆ ಮಾಡುತ್ತಾರೆ. ಆದರೆ ಮೋದಿ ಮುಂದೆ ಸಿಎಂ ನಾಯಿಮರಿಯಂತೆ ಇರ್ತಾರೆ. ಬೊಮ್ಮಾಯಿ ಅವರೆ ಧಮ್ ತಾಕತ್ತಿದ್ದರೆ ಕೇಂದ್ರದಿಂದ ಅನುದಾನ ತನ್ನಿ ಎಂದು ವಾಗ್ದಾಳಿ ನಡೆಸಿದ್ದರು.