ನರೇಂದ್ರ ಮೋದಿಯವರು ಗುಜರಾತ್ ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ನಡೆದಿದ್ದ ಗೋಧ್ರೋತ್ತರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಬಿಬಿಸಿ ತಯಾರಿಸಿದ್ದ ಸಾಕ್ಷ್ಯಚಿತ್ರಕ್ಕೆ ದೇಶದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದು, ಇದೊಂದು ಅಪಪ್ರಚಾರದ ಉದ್ದೇಶ ಹೊಂದಿರುವ ವಸ್ತುನಿಷ್ಠವಲ್ಲದ ಸಾಕ್ಷ್ಯಚಿತ್ರ ಎಂದು ಕೇಂದ್ರ ವಿದೇಶಾಂಗ ಸಚಿವಾಲಯ ಹೇಳಿದೆ.
ಇದರ ಮಧ್ಯೆಯೂ ನವದೆಹಲಿಯ ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆ ಇಂದು ತನ್ನ ಕಚೇರಿಯಲ್ಲಿ ಈ ಸಾಕ್ಷ್ಯ ಚಿತ್ರದ ಪ್ರಸಾರ ಮಾಡುವುದಾಗಿ ಭಿತ್ತಿ ಪತ್ರ ಹಂಚಿದ್ದು, ಇದಕ್ಕೆ ವಿವಿ ಆಡಳಿತ ಮಂಡಳಿ ಆಕ್ಷೇಪ ವ್ಯಕ್ತಪಡಿಸಿದೆ. ಅಲ್ಲದೆ ಸಾಕ್ಷ್ಯ ಚಿತ್ರ ಪ್ರದರ್ಶನವನ್ನು ರದ್ದುಪಡಿಸುವಂತೆ ತಾಕೀತು ಮಾಡಿದೆ.
ಈ ಎಲ್ಲ ಬೆಳವಣಿಗೆಗಳ ನಡುವೆ ಹೈದರಾಬಾದ್ ವಿಶ್ವವಿದ್ಯಾಲಯದ ಕೆಲ ವಿದ್ಯಾರ್ಥಿಗಳು ಕ್ಯಾಂಪಸ್ ನಲ್ಲಿಯೇ ‘ಇಂಡಿಯಾ: ದಿ ಮೋದಿ ಕ್ವೆಶ್ಚನ್’ ಎಂಬ ಹೆಸರಿನ ಈ ಸಾಕ್ಷ್ಯ ಚಿತ್ರವನ್ನು ಸಾರ್ವಜನಿಕವಾಗಿಯೇ ಪ್ರದರ್ಶನ ಮಾಡಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ವಿವಿ ಆಡಳಿತ ಮಂಡಳಿ ಭದ್ರತಾ ಅಧಿಕಾರಿಯಿಂದ ವರದಿ ಕೇಳಿದೆ ಎಂದು ತಿಳಿದುಬಂದಿದೆ.