ಬೆಂಗಳೂರು: ಯುವಕನೊಬ್ಬನ ಬ್ಯಾಗ್ ನಲ್ಲಿ ತಾವೇ ಗಾಂಜಾ ಇಟ್ಟು ಬಳಿಕ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ಇಬ್ಬರು ಪೊಲೀಸ್ ಕಾನ್ಸ್ ಟೇಬಲ್ ಗಳನ್ನು ಅಮಾನತುಗೊಳಿಸಲಾಗಿದೆ.
ವೈಭವ್ ಪಾಟೀಲ್ ಎಂಬುವವರು ಕಳೆದ ವಾರ ಸಾಮಾಜಿಕ ಜಾಲತಾಣಗಳಲ್ಲಿ ಪೊಲೀಸ್ ಸಿಬ್ಬಂದಿಗಳಿಂದ ತನಗಾದ ಅನ್ಯಾಯದ ಬಗ್ಗೆ ಬರೆದುಕೊಂಡಿದ್ದರು. ಬೆಂಗಳೂರಿನ ಹೆಚ್ ಎಸ್ ಆರ್ ಲೇಔಟ್ ನಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿಗಳು ನನಗೆ ಕಿರುಕುಳ ನೀಡಿದ್ದು, ಅನಗತ್ಯವಾಗಿ ಮಾದಕವಸ್ತು ಕಾಯ್ದೆ ಪ್ರಕರಣದಲ್ಲಿ ಸಿಲುಕಿಸಲು ಯತ್ನಿಸಿದ್ದಾರೆ ಎಂದು ನೋವು ತೋಡಿಕೊಂಡಿದ್ದರು. ಅಲ್ಲದೇ ಬಂಡೇಪಾಳ್ಯ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಹೆಚ್ ಎಸ್ ಆರ್ ಲೇಔಟ್ ನಲ್ಲಿ ರ್ಯಾಪಿಡೋ ಬೈಕ್ ನಲ್ಲಿ ಹೋಗುತ್ತಿದ್ದಾಗ ಬೈಕ್ ತಡೆದ ಇಬ್ಬರು ಪೊಲೀಸ್ ಸಿಬ್ಬಂದಿ ನನ್ನ ಬ್ಯಾಕ್ ಪರಿಶೀಲಿಸುವ ನೆಪದಲ್ಲಿ ನನ್ನ ಬ್ಯಾಗ್ ನಲ್ಲಿ ಗಾಂಜಾ ಪೊಟ್ಟಣ ಇಟ್ಟು ಅದನ್ನು ಬ್ಯಾಗ್ ನಿಂದಹೊರತೆಗುತ್ತಿರುವಂತೆ ನಾಟಕ ಮಾಡಿದ್ದಾರೆ. ಗಾಂಜಾ ಸೇದುತ್ತಿಯಾ ಎಂದು ಒಪ್ಪಿಕೊಳ್ಳುವಂತೆ ಒತ್ತಾಯಿಸಿದ್ದಾರೆ. ಹಣ ಕೊಡಬೇಕು ಇಲ್ಲ ಅರೆಸ್ಟ್ ಮಾಡುವುದಾಗಿ ಬೆದರಿಸಿ ನನ್ನ ಬಳಿ ಇದ್ದ 2500 ರೂಪಾಯಿ ಕಿತ್ತುಕೊಂಡು ಹೋಗಿದ್ದಾರೆ. ಪೊಲೀಸ್ ಅಧಿಕಾರಿಯೊಬ್ಬರ ನೆರವಿನಿಂದ ಪಾರಾಗಿದ್ದಾಗಿ ತಿಳಿಸಿದ್ದಾರೆ. ಪ್ರಕರಣ ಸಂಬಂಧ ಪೊಲೀಸ್ ಸಿಬ್ಬಂದಿಗಳಿಬ್ಬರ ಕರ್ತವ್ಯಲೋಪ ಸಾಬೀತಾದ ಹಿನ್ನೆಲೆಯಲ್ಲಿ ಕಾನ್ಸ್ಟೇಬಲ್ ಇಬ್ಬರನ್ನು ಅಮಾನತುಗೊಳಿಸಲಾಗಿದೆ ಎಂದು ಡಿಸಿಪಿ ಸಿ.ಕೆ.ಬಾಬಾ ತಿಳಿಸಿದ್ದಾರೆ.