ಬೆಂಗಳೂರು: ಪೋಕ್ಸೋ ಪ್ರಕರಣದಲ್ಲಿ ಜೈಲುವಾಸ ಅನುಭವಿಸುತ್ತಿರುವ ಚಿತ್ರದುರ್ಗದ ಮುರುಘಾಶ್ರೀಗಳಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಮುರುಘಾಶ್ರೀಗಳ ವಿರುದ್ಧ ಬೆಂಗಳೂರು ಕೋರ್ಟ್ ಬಾಡಿ ವಾರಂಟ್ ಹೊರಡಿಸಿದೆ.
ಮುರುಘಾಶ್ರೀ ಕೋರ್ಟ್ ಗೆ ಹಾಜರಾಗದ ಹಿನ್ನೆಲೆಯಲ್ಲಿ ಬೆಂಗಳೂರಿನ ಮ್ಯಾಜಿಸ್ಟ್ರೇಟ್ ಕೋರ್ಟ್ ಬಾಡಿ ವಾರಂಟ್ ಜಾರಿಗೊಳಿಸಿದ್ದು, ಫೆಬ್ರವರಿ 9ರಂದು ಶ್ರೀಗಳನ್ನು ಕೋರ್ಟ್ ಗೆ ಹಾಜರುಪಡಿಸುವಂತೆ ಚಿತ್ರದುರ್ಗದ ಎಸ್ ಪಿ ಕೆ.ಪರಶುರಾಮ್ ಅವರಿಗೆ ಸೂಚಿಸಿದೆ.
2009ರಲ್ಲಿ ಮುರುಘಾಶ್ರೀ ವಿರುದ್ಧ ಪಿ.ಎಸ್.ಪ್ರಕಾಶ್ ಎಂಬುವವರು ಪ್ರಕರಣ ದಾಖಲಿಸಿದ್ದರು. ಬೆಂಗಳೂರಿನ ತಿಪ್ಪಶೆಟ್ಟಿ ಮಠದ ಆಸ್ತಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಕೇಸ್ ದಾಖಲಿಸಿದ್ದರು. ಮುರುಘಾಶ್ರೀ ವಿರುದ್ಧ ಐಪಿಸಿ ಸೆಕ್ಷನ್ 420, 405, 406, 418 ಅಡಿ ಪ್ರಕರಣ ದಾಖಲಾಗಿತ್ತು. ಇದೀಗ ಈ ಪ್ರಕರಣ ಸಂಬಂಧ ಕೋರ್ಟ್ ಬಾಡಿ ವಾರಂಟ್ ಹೊರಡಿಸಿದೆ.