ಮೈಸೂರು: ಕಾಂಗ್ರೆಸ್ ಜೊತೆ ಸರ್ಕಾರ ಮಾಡಿ ನಾನು ದೊಡ್ಡ ತಪ್ಪು ಮಾಡಿದೆ ಎಂದು ಮೈತ್ರಿ ಸರ್ಕಾರದ ಸಂದರ್ಭವನ್ನು ನೆನೆದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಕಾಂಗ್ರೆಸ್ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಕುಮಾರಸ್ವಾಮಿ, ಕಾಂಗ್ರೆಸ್ ಜೊತೆ ಮೈತ್ರಿ ಸರ್ಕಾರ ಮಾಡಿ ತಪ್ಪು ಮಾಡಿದೆ. ಕಾಂಗ್ರೆಸ್ ನಾಯಕರು ನಮ್ಮನ್ನು, ಜೆಡಿಎಸ್ ಶಾಸಕರನ್ನು ತುಂಬ ಕೆಟ್ಟದಾಗಿ ನಡೆಸಿಕೊಂಡರು. ಆ ಸರ್ಕಾರದ ಕಾಲದಲ್ಲಿ ರೈತರ ಸಾಲ ಮನ್ನಾ ಮಾಡಿದ ಒಂದು ತೃಪ್ತಿಯಷ್ಟೇ ನನಗಿದೆ ಎಂದಿದ್ದಾರೆ.
ಒಬ್ಬ ಮುಖ್ಯಮಂತ್ರಿಯಾಗಿ ನಾನು ಜಾರ್ಜ್ ಹೋಟೆಲ್ ನಲ್ಲಿ ಅಬ್ಬೇಪಾರಿ ತರ ಓಡಾಡಬೇಕಾದ ಸ್ಥಿತಿ. ಒಳಗಡೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯುತ್ತಿತ್ತು. ಎಷ್ಟು ಹೊತ್ತಾದರೂ ಬಾಗಿಲು ತೆರೆಯುತ್ತಿರಲಿಲ್ಲ. 15-20 ನಿಮಿಷಗಳ ಕಾಲ ಹೋಟೆಲ್ ಹೊರಗೆ ಓಡಾಡುತ್ತಿದ್ದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಜೆಡಿಎಸ್, ಬಿಜೆಪಿ ಬಿ ಟೀಂ ಎಂದು ನಮ್ಮ ಕುತ್ತಿಗೆ ಕುಯ್ದರು. ನಾನೇನು ಅಂದು ಅಧಿಕಾರಕ್ಕಾಗಿ ಕಾಂಗ್ರೆಸ್ ಗೆ ಅರ್ಜಿ ಹಾಕಿರಲಿಲ್ಲ. ತಾಯಿ ಚಾಮುಂಡಿ ಸನ್ನಿಧಾನದಲ್ಲಿ ಹೇಳುತ್ತಿದ್ದೇನೆ. 2023ರಲ್ಲಿ ಚಾಮುಂಡೇಶ್ವರಿ ತೀರ್ಮಾನ ಕೊಡುತ್ತಾಳೆ. ಈ ಚುನಾವಣೆ ಎಲ್ಲಾ ರಾಜಕೀಯ ಪಕ್ಷಕ್ಕೂ ಅಗ್ನಿಪರೀಕ್ಷೆ ಕಾಲ ಎಂದು ಹೇಳಿದರು.