ರಾಯಚೂರು: ವಿಧಾನಸಭಾ ಚುನಾವಣೆಗೆ ಕೇವಲ ಮೂರು ದಿನಗಳು ಬಾಕಿಯಿದ್ದು, ರಾಜಕೀಯ ನಾಯಕರ ವಾಕ್ಸಮರ ತಾರಕಕ್ಕೇರಿದೆ. ಬಿಜೆಪಿಯವರು ವಿಷಜಂತುಗಳು ಎಂದು ಜರಿದಿದ್ದ ಮಾಜಿ ಸಚಿವೆ, ಕಾಂಗ್ರೆಸ್ ನಾಯಕಿ ಉಮಾಶ್ರೀ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
ರಾಯಚೂರಿನ ಮಸ್ಕಿ ಪೊಲೀಸ್ ಠಾಣೆಯಲ್ಲಿ ಉಮಾಶ್ರೀ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಮಸ್ಕಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ್ದ ಉಮಾಶ್ರೀ, ಬಿಜೆಪಿ ಮುಖಂಡರು ಧರ್ಮಗಳನ್ನು ಒಡೆದು ಕೋಮುವಾದ ಸೃಷ್ಟಿಸುತ್ತಿದ್ದಾರೆ. ಬಿಜೆಪಿಯವರು ವಿಷಜಂತುಗಳು ಎಂದು ಕಿಡಿಕಾರಿದ್ದರು.
ಇನ್ನೊಂದೆಡೆ ಕಾಂಗ್ರೆಸ್ ಪಕ್ಷದ ಜಾಹೀರಾತುಗಳನ್ನು ಗಂಭೀರವಾಗಿ ಪರಿಗಣಿಸಿರುವ ಚುನಾವಣಾ ಆಯೋಗ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೂ ನೋಟೀಸ್ ಜಾರಿ ಮಾಡಿದೆ. ಕಾಂಗ್ರೆಸ್ ಮಾಡಿರುವ ನಿರ್ದಿಷ್ಟ ಆರೋಪಗಳಿಗೆ ಸಾಕ್ಷ್ಯಾಧಾರ ಒದಗಿಸುವಂತೆ ಸೂಚಿಸಿದೆ.