ಬೆಂಗಳೂರು: ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ ಟೋಲ್ ಸಂಗ್ರಹ ವಿವಾದ ಜನರಿಂದ ಆಗಿರುವುದಲ್ಲ, ಇದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ರಾಜಕೀಯದಿಂದ ಆಗಿರುವುದು ಎಂದು ಸಿಎಂ ಬಸವರಾಜ್ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ಕಾಂಗ್ರೆಸ್ ನಾಯಕರು ರಾಜಕಾರಣಕ್ಕಾಗಿ ಬೆಂಗಳೂರು-ಮೈಸೂರು ಹೈವೆ ಟೋಲ್ ಸಂಗ್ರಹ ತಕರಾರು ಆರಂಭಿಸಿದ್ದಾರೆ. ಈ ಮೂಲಕ ಜನರಲ್ಲಿ ಗೊಂದಲ ಉಂಟುಮಾಡುತ್ತಿದ್ದಾರೆ ಎಂದರು.
ಟೋಲ್ ಸಂಗ್ರಹದ ಬಗ್ಗೆ ತಕರಾರು ಜನಸಾಮಾನ್ಯರದ್ದಲ್ಲ, ಈ ವಿಚಾರದಲ್ಲಿ ಡಿ.ಕೆ. ಶಿವಕುಮಾರ್ ಅವರು ರಾಜಕಾರಣ ಮಾಡುತ್ತಿದ್ದಾರೆ. ಅವರ ಭಾಷೆ, ನಡೆದುಕೊಂಡ ರೀತಿ ಕನ್ನಡಿಗರಿಗೆ ಶೋಭೆ ತರುವಂಥದ್ದಲ್ಲ. ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಬರುವ ಮುನ್ನವೂ ಟೋಲ್ ಸಂಗ್ರಹವಾಗುತ್ತಿದೆ ಎನ್ನುವುದು ಎಲ್ಲರಿಗೂ ತಿಳಿದಿದೆ. ಬಹಳಷ್ಟು ಸೇವೆಗಳು ಸರ್ವಿಸ್ ರಸ್ತೆಯಲ್ಲಿಯೇ ಇದೆ. ಅಲ್ಲೆಲ್ಲೂ ಟೋಲ್ ಇಲ್ಲ ಎಂದು ಸ್ಪಷ್ಟಪಡಿಸಿದರು.