ಬೆಂಗಳೂರು: ನೂತನ ಮುಖ್ಯಮಂತ್ರಿ ಆಯ್ಕೆ ವಿಚಾರ ಇನ್ನು ಬಗೆಹರಿಯದ ಹಿನ್ನೆಲೆಯಲ್ಲಿ ಕಂಠೀರವ ಸ್ಟೇಡಿಯಂ ನಲ್ಲಿ ನೂತನ ಸಿಎಂ ಪ್ರಮಾಣವಚನಕ್ಕೆ ನಡೆಸಿದ್ದ ಸಿದ್ಧತೆ ಸ್ಥಗಿತಗೊಂಡಿದೆ.
ಮಾಜಿ ಸಿಎಂ ಸಿದ್ದರಾಮಯ್ಯ ಹೆಸರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಫೈನಲ್ ಮಾಡಲಾಗಿದೆ. ನಾಳೆ ಮಧ್ಯಾಹ್ನ 3:30ಕ್ಕೆ ನೂತನ ಮುಖ್ಯಮಂತ್ರಿ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ನಡೆಯಲಿದೆ ಎಂಬ ಸುದ್ದಿ ಬೆನ್ನಲ್ಲೇ ಇತ್ತ ಕಂಠೀರವ ಸ್ಟೇಡಿಯಂ ನಲ್ಲಿ ಪ್ರಮಾನವಚನ ಕಾರ್ಯಕ್ರಮಕ್ಕೆ ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಕ್ರೀಡಾಂಗಣದಲ್ಲಿ ರೆಡ್ ಕಾರ್ಪೆಟ್ ಹಾಸಲಾಗಿತ್ತು. ಕಾಂಗ್ರೆಸ್ ಬಾವುಟ, ಬ್ಯಾನರ್ ಗಳನ್ನು ಅಳವಡಿಸಲಾಗಿತ್ತು, ಇನ್ನೊಂದೆಡೆ ವೇದಿಕೆ ಸಿದ್ಧತೆ, ಗಣ್ಯರು, ಶಾಸಕರು, ಸಾರ್ವಜನಿಕರಿಗಾಗಿ ಪ್ರತ್ಯೇಕ ಆಸನದ ವ್ಯವಸ್ಥೆ ಮಾಡಲಾಗಿತ್ತು. ಆದರೆ ಸಿಎಂ ಹುದ್ದೆಗಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಿಗಿ ಪಟ್ಟು ಹಿಡಿದಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಆಯ್ಕೆ ವಿಚಾರವನ್ನು ಎಐಸಿಸಿ ಪೆಂಡಿಂಗ್ ನಲ್ಲಿಟ್ಟಿದೆ.
ಈ ಹಿನ್ನೆಲೆಯಲ್ಲಿ ನಾಳೆಯೂ ನೂತನ ಸಿಎಂ ಆಯ್ಕೆ ಘೋಷಣೆಯಾಗುವುದು ಅನುಮಾನ. ಈ ಬೆಳವಣಿಗೆ ಬೆನ್ನಲ್ಲೇ ಕಂಠಿರವ ಸ್ಟೇಡಿಯಂನಲ್ಲಿ ಸಿದ್ಧತಾ ಕಾರ್ಯಕ್ರಮವೇ ಸ್ಥಗಿತಗೊಂಡಿದ್ದು, ರೆಡ್ ಕಾರ್ಪೆಟ್, ಕುರ್ಚಿ, ವೇದಿಕೆ ಸಿದ್ಧತೆಗಳನ್ನು ನಿಲ್ಲಿಸಲಾಗಿದ್ದು, ಬ್ಯಾನರ್, ಬಾವುಟ, ಕುರ್ಚಿಗಳನ್ನು ತೆಗೆಯಲಾಗಿದೆ.