ಸ್ಥಳೀಯ ಸಂಸ್ಥೆಗಳಲ್ಲಿ ಹೊರಗುತ್ತಿಗೆ ಅಡಿ ಕಾರ್ಯ ನಿರ್ವಹಿಸುತ್ತಿರುವ ತ್ಯಾಜ್ಯ ವಿಲೇವಾರಿ ವಾಹನ ಚಾಲಕರು ಹಾಗೂ ನೀರು ಸರಬರಾಜು ಸಹಾಯಕರೂ ಸೇರಿದಂತೆ ವಿವಿಧ ವಲಯಗಳ ಪೌರಕಾರ್ಮಿಕರು ನಾಳೆಯಿಂದ ಅನಿರ್ದಿಷ್ಟಾವದಿ ಮುಷ್ಕರ ಆರಂಭಿಸಲಿದ್ದಾರೆ.
ಸೇವೆ ಕಾಯಮಾತಿಗೆ ಆಗ್ರಹಿಸಿ ಜಿಲ್ಲಾಧಿಕಾರಿ, ತಹಶೀಲ್ದಾರ್ ಕಚೇರಿ ಎದುರು ಮುಷ್ಕರ ನಡೆಯಲಿದೆ ಎಂದು ಕರ್ನಾಟಕ ರಾಜ್ಯ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹೊರಗುತ್ತಿಗೆ ನೌಕರರ ಸಂಘದ ರಾಜ್ಯಾಧ್ಯಕ್ಷ ಎಂ.ಬಿ. ನಾಗಣ್ಣಗೌಡ ತಿಳಿಸಿದ್ದಾರೆ.
ಈ ಕುರಿತಂತೆ ಮಾತನಾಡಿದ ಅವರು ಪೌರಕಾರ್ಮಿಕರನ್ನು ಖಾಯಂಗೊಳಿಸಲು ಸರ್ಕಾರ ಮುಂದಾಗಿದ್ದು, ಆದರೆ ಕಸ ವಿಲೇವಾರಿ ವಾಹನ ಚಾಲಕರು, ಸಹಾಯಕರು ಹಾಗೂ ನೀರು ಪೂರೈಕೆದಾರರನ್ನು ಕಡೆಗಣಿಸಿದೆ ಎಂದು ಆರೋಪಿಸಿದರು. ಇದರಿಂದ ಹದಿನೈದು ಸಾವಿರಕ್ಕೂ ಅಧಿಕ ಕಾರ್ಮಿಕರು ಅತಂತ್ರವಾಗಿದ್ದು, ಈ ಹಿನ್ನೆಲೆಯಲ್ಲಿ ಮುಷ್ಕರ ನಡೆಸಲಾಗುತ್ತಿದೆ ಎಂದು ತಿಳಿಸಿದರು.