ಮಾನ್ವಿ: ಸಿಎಂ ಬಸವರಾಜ್ ಬೊಮ್ಮಾಯಿ ಕರ್ನಾಟಕದ ಇತಿಹಾಸದಲ್ಲಿಯೇ ಅತಿ ಭ್ರಷ್ಟ ಸಿಎಂ ಎಂದು ನಾನು ಹೇಳಿದರೆ ನನ್ನ ಹೇಳಿಕೆಯನ್ನೇ ತಿರುಚಿ ಲಿಂಗಾಯಿತರು ಭ್ರಷ್ಟರು ಎಂದು ಹೇಳಿದ್ದೇನೆ ಎಂದು ಬಿಜೆಪಿಯವರು ಅಪಪ್ರಚಾರ ಮಾಡಿದರು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ರಾಯಚೂರು ಜಿಲ್ಲೆಯ ಮಾನ್ವಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ನಡೆಸಿ, ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಬಸವರಾಜ್ ಬೊಮ್ಮಾಯಿ ಮಹಾನ್ ಕಳ್ಳ. ಬಸವರಾಜ್ ಬೊಮ್ಮಾಯಿ ಅಂತಹ ಭ್ರಷ್ಟ ಸಿಎಂ ಇದುವರೆಗೂ ರಾಜ್ಯದಲ್ಲಿ ಬಂದಿರಲಿಲ್ಲ ಎಂದು ಹೇಳಿದರು.
ಬಸವರಾಜ್ ಬೊಮ್ಮಾಯಿಯಂತಹ ಭ್ರಷ್ಟ ಮುಖ್ಯಮಂತ್ರಿ ರಾಜ್ಯದ ಇತಿಹಾಸದಲ್ಲಿಯೇ ಕಂಡಿರಲಿಲ್ಲ ಎಂದು ನಾನು ಹೇಳಿದ್ದೆ. ಆದರೆ ನಾನು ಹೇಳಿದ್ದನ್ನು ಬಿಜೆಪಿಯವರು ತಿರುಚಿದರು. ಲಿಂಗಾಯಿತ ಮುಖ್ಯಮಂತ್ರಿಗಳು ಭ್ರಷ್ಟರು ಎಂದು ಹೇಳಿದ್ದೇನೆ ಎಂದು ಹೇಳಿದರು. ನನ್ನ ಹೇಳಿಕೆಯನ್ನು ಟ್ವಿಸ್ಟ್ ಮಾಡಲು ಹೋಗಿ ಠುಸ್ ಆಯ್ತು. ಈ ಹಿಂದಿನ ಲಿಂಗಾಯಿತ ಸಿಎಂ ಗಳು ಒಳ್ಳೆಯವರೇ ಇದ್ದರು. ಆದರೆ ಬಸವರಾಜ್ ಬೊಮ್ಮಾಯಿ ಮಾತ್ರ ಮಹಾನ್ ಕಳ್ಳ ಎಂದು ಕೆಂಡ ಕಾರಿದ್ದಾರೆ.