ಹುಬ್ಬಳ್ಳಿ: ಜೇನುನೊಣಗಳಿಂದ ಕಚ್ಚಿಸಿಕೊಂಡರೂ ನಾನು ಸಿಹಿ ಹಂಚುವ ಕೆಲಸ ಮಾಡಿದ್ದೇನೆ. ಆದರೆ ವಿಪಕ್ಷದವರು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಟಾಂಗ್ ನೀಡಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, .ಒಳಮೀಸಲಾತಿ ವಿಚಾರ ಕಳೆದ 30 ವರ್ಷಗಳಿಂದ ಇತ್ತು. ಆದರೆ ಕಾಂಗ್ರೆಸ್ ನವರು ಆ ಜನಾಂಗದವರಿಗೆ ಮೂಗಿಗೆ ತುಪ್ಪ ಹಚ್ಚಿ ಕೊನೆ ಘಳಿಗೆಯಲ್ಲಿ ಕೈಕೊಟ್ಟರು. ನಮ್ಮ ಸರ್ಕಾರಕ್ಕೆ ಬದ್ಧತೆ ಇದೆ. ಹಾಗಾಗಿ ಈ ಬಗ್ಗೆ ಅಧ್ಯಯನ ಮಾಡಿ ಸಚಿವ ಸಂಪುಟ ಉಪ ಸಮಿತಿ ರಚನೆ ಮಾಡಿ ಕಾನೂನು ಪ್ರಕಾರ ಜಾರಿಗೆ ತಂದಿದ್ದೇವೆ ಎಂದರು.
ಕಾಂಗ್ರೆಸ್ ನವರಿಗೆ ಹತಾಶೆಯಾಗಿದೆ. ನಮ್ಮಿಂದ ಆಗದಿರುವುದನ್ನು ಇವರು ಮಾಡಿದರಲ್ಲ ಎಂಬ ಹತಾಶೆಯಿಂದ ಬಿಜೆಪಿ ವಿರುದ್ಧ ಮಾತನಾಡುತ್ತಿದ್ದಾರೆ. ಹೇಳಿಕೆಗಳ ಮೂಲಕ ಸಹಾನುಭೂತಿ ತೋರಿಸಿ ಚುನಾವಣೆಯ ಸಂದರ್ಭಗಳಲ್ಲಿ ಯಾಮಾರಿಸಬಹುದು ಅಂದುಕೊಂಡಿದ್ದರು. ಆದರೆ ಅದು ಸಾಧ್ಯವಾಗಿಲ್ಲ ಎಂದು ಟೀಕಿಸಿದರು.
ಮೀಸಲಾತಿ ವಿಚಾರವಾಗಿ ನಾವು ಚರ್ಚಿಸಿದಾಗ ಜೇನು ಗೂಡಿಗೆ ಕೈ ಹಾಕಿದ್ದಾರೆ ಎಂದು ನಮಗೆ ಹೇಳಿದರು. ಜೇನುಗೂಡಿಗೆ ಕೈಹಾಕದಿದ್ದಲ್ಲಿ ಜೇನು ಸಿಗಲ್ಲ ಎಂಬುದು ನಮಗೆ ಗೊತ್ತಿತ್ತು. ಜೇನುನೊಣಗಳಿಂದ ಕಚ್ಚಿಸಿಕೊಂಡಾದರೂ ಸರಿ ಸಿಹಿ ಹಂಚುತ್ತೇನೆ ಎಂದಿದ್ದೆ. ಅದರಂತೆ ಜೇನುನೊಣಗಳಿಂದ ಕಚ್ಚಿಸಿಕೊಂಡರೂ ಆ ಸಮುದಾಯಗಳಿಗೆ ಜೇನು ಸಿಹಿ ಹಂಚಿದ್ದೇನೆ ಎಂದು ಹೇಳಿದರು.