ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದು, ಸದನದಲ್ಲಿ ತಮ್ಮ ಕೊನೆಯ ಭಾಷಣ ಮಾಡಿದ್ದಾರೆ. ಈ ಸಂದರ್ಭದಲ್ಲಿ ಆರ್.ಎಸ್.ಎಸ್, ಬಿಜೆಪಿ, ಮಾಜಿ ಪ್ರಧಾನಿ ದೇವೇಗೌಡ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕುರಿತು ಹೊಗಳಿಕೆಯ ಮಾತುಗಳನ್ನು ಆಡಿದ್ದಾರೆ.
80 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ತಾವು ಚುನಾವಣಾ ರಾಜಕೀಯದಿಂದ ಸ್ವಯಂ ನಿವೃತ್ತಿ ಪಡೆದಿರುವುದಾಗಿ ಯಡಿಯೂರಪ್ಪನವರು ಹೇಳಿರುವರಾದರೂ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ವೀರಶೈವ ಲಿಂಗಾಯಿತ ಮತಗಳು ದೂರವಾಗುತ್ತವೆ ಎಂಬ ಆತಂಕ ಬಿಜೆಪಿ ನಾಯಕರನ್ನು ಕಾಡುತ್ತಿದೆ ಎನ್ನಲಾಗಿದೆ.
ವೀರಶೈವ ಲಿಂಗಾಯತ ಸಮುದಾಯದ ಪ್ರಶ್ನಾತೀತ ನಾಯಕರಾಗಿದ್ದ ಯಡಿಯೂರಪ್ಪನವರ ಬೆನ್ನಿಗೆ ಆ ಸಮುದಾಯ ಈವರೆಗೆ ನಿಂತಿದ್ದು, ಆದರೆ ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪನವರನ್ನು ಕೆಳಗಿಳಿಸಿದ ಸಂದರ್ಭದಲ್ಲಿಯೇ ಅಸಮಾಧಾನ ವ್ಯಕ್ತವಾಗಿತ್ತು. ಇದೀಗ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಸಿಗುವ ಸಾಧ್ಯತೆ ಇಲ್ಲದ ಕಾರಣ ಈ ಮೊದಲಿನಂತೆ ವೀರಶೈವ ಲಿಂಗಾಯತ ಸಮುದಾಯ ಬಿಜೆಪಿ ಪರವಾಗಿರಲಿದೆಯಾ ಎಂಬ ಪ್ರಶ್ನೆ ಮೂಡಿದೆ.
ಹೀಗಾಗಿಯೇ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿರುವ ಯಡಿಯೂರಪ್ಪನವರು, ಚುನಾವಣಾ ರಾಜಕೀಯ ನಿವೃತ್ತಿ ನನ್ನ ಸ್ವಂತ ನಿರ್ಧಾರ. 80 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಈ ತೀರ್ಮಾನ ಕೈಗೊಂಡಿದ್ದೇನೆ. ವೀರಶೈವ ಲಿಂಗಾಯತ ಸಮುದಾಯ ಈ ಮೊದಲಿನಂತೆ ಬಿಜೆಪಿಗೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ಆದರೆ ಇದಕ್ಕೆ ಎಷ್ಟರಮಟ್ಟಿಗೆ ಸ್ಪಂದನೆ ಸಿಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.