ಬೆಂಗಳೂರು: ಚುನಾವಣೆಗೂ ಮುನ್ನ ನಾವು ರಾಜ್ಯದ ಜನತೆಗೆ 5 ಗ್ಯಾರಂಟಿ ಯೋಜನೆಗಳ ಭರವಸೆ ನೀಡಿದ್ದೆವು. ಅದರಂತೆ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುತ್ತಿದ್ದೇವೆ. ಇಂದು ಶಕ್ತಿ ಯೋಜನೆಯಡಿ ಮಹಿಳೆಯರ ಉಚಿತ ಬಸ್ ಪ್ರಯಾಣಕ್ಕೆ ಚಾಲನೆ ನೀಡಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಶಕ್ತಿ ಯೋಜನೆಗೆ ಚಾಲನೆ ನೀಡಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಚುನಾವಣೆಯ ವೇಳೆ ಹಲವು ಯೋಜನೆಗಳ ಪ್ರಣಾಳಿಕೆ ಬಿಡುಗಡೆ ಮಾಡಿದ್ದೆವು. ಅದರಲ್ಲಿ ಪ್ರಮುಖವಾಗಿ 5 ಗ್ಯಾರಂಟಿ ಯೋಜನೆಗಳ ಭರವಸೆ ನೀಡಿದ್ದೆವು. ನಾನು ಹಾಗೂ ಡಿ.ಕೆ.ಶಿವಕುಮಾರ್ ಮನೆ ಮನೆಗೆ ಗ್ಯಾರಂಟಿ ಕಾರ್ಡ್ ಕೊಟ್ಟಿದ್ದೆವು. ಅದನ್ನು ಬಿಜೆಪಿ, ಜೆಡಿಎಸ್ ನವರು ಗೇಲಿ ಮಾಡಿದ್ದರು. ವಿಪಕ್ಷಗಳ ಟೀಕೆಗೆ ನಾವು ವಿಚಲಿತರಾಗಿಲ್ಲ. ರಾಜ್ಯದ ಜನರ ಆಶಿರ್ವಾದದಿಂದ ನಮಗೆ ಸ್ಪಷ್ಟ ಬಹುಮತ ಸಿಕ್ಕಿತು. ಹಾಗಾಗಿ ನಾವು ಜನರಿಗೆ ಕೊಟ್ಟ ಭರವಸೆ ಈಡೇರಿಸುತ್ತಿದ್ದೇವೆ ಎಂದರು.
ಮೊದಲ ಕ್ಯಾಬಿನೆಟ್ ನಲ್ಲಿಯೇ ಗ್ಯಾರಾಂಟಿಗಳಿಗೆ ಅನುಮೋದನೆ ದೊರೆಯಿತು. ಗ್ಯಾರಂಟಿಗಳನ್ನು ಒಂದೊಂದಾಗಿ ಈಡೇರಿಸುತ್ತಿದ್ದೇವೆ. ಗೇಲಿ ಮಾಡುವವರು ಗೇಲಿ ಮಾಡಿಕೊಂಡು ಅಲ್ಲೇ ಇರಲಿ. ನಾವು ಕೊಟ್ಟ ಭರವಸೆ ಈಡೇರಿಸುತ್ತಾ ಅಭಿವೃದ್ಧಿ ಮಾಡುತ್ತಾ ಮುಂದೆ ಸಾಗುತ್ತೇವೆ ಎಂದು ಟಾಂಗ್ ನೀಡಿದರು. ಇದೇ ವೇಳೆ ಗ್ಯಾರಂಟಿಗಳಿಗೆ ಯಾವುದೇ ಮಧ್ಯವರ್ತಿಗಳಿಲ್ಲ. ಫಲಾನುಭವಿಗಳು ನೇರವಾಗಿ ಯೋಜನೆ ಉಪಯೋಗ ಪಡೆಯಬಹುದು ಎಂದು ಹೇಳಿದರು.