ನಾಲ್ಕು ದಶಕಗಳ ಬಿಜೆಪಿ ಜೊತೆಗಿನ ತಮ್ಮ ನಂಟು ಕಡಿದುಕೊಂಡಿರುವ ಜಗದೀಶ್ ಶೆಟ್ಟರ್ ಈಗ ಹುಬ್ಬಳ್ಳಿ – ಧಾರವಾಡ ಸೆಂಟ್ರಲ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಹುಬ್ಬಳ್ಳಿಯಲ್ಲಿ ಇಂದು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ತಮಗೆ ಟಿಕೆಟ್ ಕೈತಪ್ಪಲು ಕಾರಣವಾದ ಅಂಶಗಳನ್ನು ಶೆಟ್ಟರ್ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ವಿರುದ್ಧ ಸತತ ವಾಗ್ದಾಳಿ ನಡೆಸಿದ ಅವರು, ತಮ್ಮ ಮಾನಸ ಪುತ್ರನ ಸಲುವಾಗಿ ಬಿ.ಎಲ್. ಸಂತೋಷ್ ನನಗೆ ಟಿಕೆಟ್ ತಪ್ಪಿಸಿದರು. ನನ್ನ ಈ ಪರಿಸ್ಥಿತಿಗೆ ಅವರೇ ಕಾರಣ ಎಂದು ಹೇಳಿದ್ದಾರೆ. ಅಲ್ಲದೆ ಕರ್ನಾಟಕ ಬಿಜೆಪಿ ಕೆಲವೇ ಕೆಲವರ ಕಪಿಮುಷ್ಠಿಯಲ್ಲಿದೆ ಎಂದು ಶೆಟ್ಟರ್ ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ತಮ್ಮವರನ್ನೇ ತಂದು ಕೂರಿಸಿರುವ ಬಿ.ಎಲ್. ಸಂತೋಷ್, ಟಿಕೆಟ್ ಹಂಚಿಕೆ ವಿಚಾರವಾಗಿ ಹಿರಿಯ ನಾಯಕರ ಕ್ಷೇತ್ರಗಳಲ್ಲೂ ಕೈಯಾಡಿಸುತ್ತಿದ್ದಾರೆ. ತಮ್ಮ ಆಪ್ತ ಮಹೇಶ್ ಟೆಂಗಿನಕಾಯಿಗೆ ಸಂತೋಷ್ ಹುಬ್ಬಳ್ಳಿ – ಧಾರವಾಡ ಸೆಂಟ್ರಲ್ ಕ್ಷೇತ್ರದ ಟಿಕೆಟ್ ಕೊಡಿಸಿದ್ದಾರೆ ಎಂದರು.
ಮೈಸೂರಿನ ಕೃಷ್ಣರಾಜ ಕ್ಷೇತ್ರದಲ್ಲಿ ಎ. ರಾಮದಾಸ್ ಗೆಲುವು ಖಚಿತವಾಗಿತ್ತು. ಆದರೆ ತಮ್ಮ ಆಪ್ತ ಶ್ರೀವತ್ಸ ಎಂಬವರಿಗೆ ಟಿಕೆಟ್ ಕೊಡಿಸುವ ಸಲುವಾಗಿ ಬಿ ಎಲ್ ಸಂತೋಷ್, ರಾಮದಾಸ್ ಅವರಿಗೆ ಅವಕಾಶ ತಪ್ಪಿಸಿದ್ದಾರೆ. ಹೀಗಾಗಿ ಗೆಲ್ಲುವಂತಹ ಕ್ಷೇತ್ರ ಬಿಜೆಪಿ ಕೈತಪ್ಪುತ್ತಿದೆ. ಇದೇ ಪರಿಸ್ಥಿತಿ ರಾಜ್ಯದ ಹಲವು ಕ್ಷೇತ್ರಗಳಲ್ಲಿ ಎದುರಾಗಲಿದೆ ಎಂದು ಶೆಟ್ಟರ್ ಹೇಳಿದರು.