ಬೆಂಗಳೂರು: ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಅವರಿಗೆ ಸರ್ಕಾರದ ಸಭೆಗಳನ್ನು ನಡೆಸಲು ಅಧಿಕಾರ ಕೊಟ್ಟಿದ್ದು ಯಾರು? ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ರಾಜ್ಯದಲ್ಲಿರುವುದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವೋ? ಅಥವಾ ದಿಲ್ಲಿಯ ಹಂಗಿನ ಸರ್ಕಾರವೋ? ಕನ್ನಡಿಗರು ಮತ ಹಾಕಿದ್ದು ಕೈ ಸರ್ಕಾರಕ್ಕಾ? ಅಥವಾ ಕೈಗೊಂಬೆ ಸರ್ಕಾರಕ್ಕಾ? ಎಂದು ಕೇಳಿದ್ದಾರೆ.
ಜನರ ವೋಟು ಹಂಗಿನ ಸರ್ಕಾರದ ಪಾಲಾಗಿದೆ. ಸರ್ಕಾರಕ್ಕೆ ತಿಂಗಳು ತುಂಬುವ ಮೊದಲೇ ಅದು ಸಾಬೀತಾಗಿದೆ. ಸಿಎಂ ನೇತೃತ್ವದ ರಾಜ್ಯ ಸರ್ಕಾರ, ನೇರವಾಗಿ ಹೈಕಮಾಂಡ್ ನಾಯಕರನ್ನು ಲೂಟಿ ಮಾಡಲು ಬಿಟ್ಟಿದೆ. ಸರ್ಕಾರದ ಸಚಿವರು, ಶಾಸಕರು ಪಾಲ್ಗೊಂಡಿದ್ದ ಸಭೆಯಲ್ಲಿ ಮಧ್ಯೆ ಸೀಟ್ ನಲ್ಲಿ ಸುರ್ಜೇವಾಲಾ ಇದ್ದಾರೆ ಎಂದರೆ ಸರ್ಕಾರದ ಅಧಿಕೃತ ಸಭೆಯಲ್ಲಿ ಇವರಿಗೇನು ಕೆಲಸ ಎಂದು ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.