ಬೆಂಗಳೂರು: ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇನಲ್ಲಿ ಅಪಘಾತ ಪ್ರಕರಣಗಳು ಹೆಚ್ಚಳ ವಿಚಾರ ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ್ದು, ಸರಿಯಾಗಿ ರಸ್ತೆ ನಿರ್ಮಾಣ ಮಾಡದಿರುವುದೇ ಅಪಘಾತಕ್ಕೆ ಕಾರಣ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ಬಿಜೆಪಿ ಶಾಸಕ ಸುರೇಶ್ ಕುಮಾರ್ ಎಕ್ಸ್ ಪ್ರೆಸ್ ವೇ ನಲ್ಲಿ ದಿನದಿಂದ ದಿನಕ್ಕೆ ಅಪಘಾತಗಳು ಹೆಚ್ಚುತ್ತಿವೆ ಎಂದು ವಿಷಯ ಪ್ರಸ್ತಾಪಿಸಿದರು. ಇದಕ್ಕೆ ಉತ್ತರ ನೀಡಿದ ಗೃಹ ಸಚಿವ ಡಾ. ಜಿ.ಪರಮೇಶ್ವರ್, ಬೆಂಗಳೂರು-ಮೈಸೂರು ಹೆದ್ದಾರಿ ನಿರ್ಮಾಣ ಸರಿಯಾಗಿ ಮಾಡಿಲ್ಲ. ಬಹಳಷ್ಟು ನ್ಯೂನ್ಯತೆಯೊಂದಿಗೆ ದಶಪಥ ರಸ್ತೆ ನಿರ್ಮಾಣ ಮಾಡಲಾಗಿದೆ. ರಸ್ತೆ ತಿರುವುಗಳಿಗೆ, ವೇಗ ಮಿತಿ ಇಳಿಕೆಗಳ ಬಗ್ಗೆ ಯಾವುದೇ ಸೂಚನಾ ಫಲಕಗಳು ಇಲ್ಲ. ಹೆದ್ದಾರಿಯಲ್ಲಿ ವೇಗವಾಗಿ ವಾಹನ ಬಂದಾಗ ಅಪಘಾತಗಳಾಗುತ್ತಿವೆ ಎಂದರು.
ಮಾರ್ಚ್ ನಲ್ಲಿ 62 ಅಪಘಾತಗಳಾಗಿವೆ. 20 ಜನರು ಸಾವನ್ನಪ್ಪಿದ್ದಾರೆ. ಮಾರ್ಚ್ ನಿಂದ ಜೂನ್ ವರೆಗೆ 100 ಜನರು ಸಾವನ್ನಪ್ಪಿದ್ದು, 335 ಜನ ಗಾಯಗೊಂಡಿದ್ದಾರೆ. ಸಂಚಾರಿ ವಿಭಾಗದ ಎಡಿಜಿಪಿ ಎಕ್ಸ್ ಪ್ರೆಸ್ ಹೈವೆ ಪರಿಶೀಲಿಸಿದ್ದಾರೆ ಎಂದು ತಿಳಿಸಿದರು.
ಇದೇ ವೇಳೆ ಪಾದಚಾರಿಗಳು ಹೆದ್ದಾರಿಗೆ ಬರದಂತೆ ತಂತಿಬೇಲಿ ಹಾಕಲು ಕ್ರಮ ಕೈಗೊಳ್ಳಲಾಗುವುದು. ಶೀಘ್ರವೇ ಹೆದ್ದಾರಿ ಪ್ರಾಧಿಕಾರಕ್ಕೆ ರಾಜ್ಯ ಸರ್ಕಾರ ಪತ್ರ ಬರೆಯಲಿದೆ ಎಂದು ಹೇಳಿದರು.