ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋತಿದ್ದು, ಸೋಲನ್ನು ವಿನಯಪೂರ್ವಕವಾಗಿ ಸ್ವೀಕರಿಸುವುದಾಗಿ ಹಂಗಾಮಿ ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹಂಗಾಮಿ ಸಿಎಂ ಬೊಮ್ಮಾಯಿ, ಈ ಸೋಲು ಪ್ರಧಾನಿ ಮೋದಿಯವರ ಸೋಲು ಎಂಬುದು ಸರಿಯಲ್ಲ. ಪ್ರಧಾನಿ ಮೋದಿ ರಾಷ್ಟ್ರದ ನಾಯಕ ಅವರು ಬಂದು ಪ್ರಚಾರ ಮಾಡಿದ್ದಾರೆ ಅಷ್ಟೇ. ಆದರೆ ಇದು ಅವರ ಸೋಲು ಎಂದು ವಿಷೇಷಣೆ ಮಾಡುವುದಕ್ಕೆ ಅರ್ಥವಿಲ್ಲ ಎಂದು ಹೇಳಿದರು.
ಸೋಲನ್ನು ನಾವು ಅತ್ಯಂತ ವಿನಯಪೂರ್ವಕವಾಗಿ ಸ್ವೀಕರಿಸುತ್ತೇವೆ. ಸೋಲಿನ ಕಾರಣಗಳನ್ನು ಗುರುತಿಸಿ ಮುಂದೆ ಹೋಗುವ ಕೆಲಸ ಮಾಡುತ್ತೇವೆ. ಮೂರ್ನಾಲ್ಕು ತಪ್ಪುಗಳಾಗಿವೆ ಅದೆಲ್ಲವನ್ನೂ ಸರಿಪಡಿಸಿಕೊಂಡು ಇನ್ನಷ್ಟು ಪಕ್ಷ ಸಂಘಟನೆ ಮಾಡುತ್ತೇವೆ ಎಂದರು.
ಇದೇ ವೇಳೆ ಕಾಂಗ್ರೆಸ್ ಗ್ಯಾರಂಟಿ ಬಗ್ಗೆ ಪ್ರತಿಕ್ರಿಯಿಸಿ, ಮೊದಲು ಅವರು ಸರ್ಕಾರ ರಚನೆ ಮಾಡಲಿ. ಮೊದಲ ಸಂಪುಟದಲ್ಲೇ ಜಾರಿಗೊಳಿಸುವುದಾಗಿ ಹೇಳಿದ್ದಾರೆ. ನೋಡೋಣ ಏನು ಮಾಡುತ್ತಾರೆ ಎಂಬುದನ್ನು ಕಾದು ನೋಡೋಣ. ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಇಬ್ಬರಿಗೂ ಆಲ್ ದಿ ಬೆಸ್ಟ್ ಎಂದು ಹೇಳಿದರು.