ಗದಗ: ಲಕ್ಷ್ಮೀಶ್ವರದಲ್ಲಿ ನಡೆದಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಮಾವೇಶದ ಸಂದರ್ಭದಲ್ಲಿ ಬಿಸಿಲಿನ ಬೇಗೆಯಿಂದ ಬೇಸತ್ತ ಜನರು ಕುಡಿಯುವ ನೀರಿಗೆ ಪರದಾಡಿದ್ದರು. ಕುಡಿಯುವ ನೀರು ಸಿಗದೇ ತಂಪು ಪಾನೀಯ ವಾಹನದ ಮೇಲೆ ಮುಗಿ ಬಿದ್ದು, ಕೂಲ್ ಡ್ರಿಂಕ್ಸ್ ಕುಡಿದು ಬಾಯಾರಿಕೆ ತಣಿಸಿಕೊಂಡಿದ್ದರು. ಹಣ ನಿಡದೇ ಜನರು ಕೂಲ್ ಡ್ರಿಂಕ್ಸ್ ಕೊಂಡೊಯ್ದಿದ್ದರಿಂದ ವ್ಯಾಪಾರಿಗೆ ಭಾರಿ ನಷ್ಟವುಂಟಾಗಿ ಕಣ್ಣೀರಿಟ್ಟಿದ್ದರು.
ಗದಗ ಜಿಲ್ಲೆಯ ಲಕ್ಷ್ಮೀಶ್ವರದಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಈ ಘಟನೆ ನಡೆದಿತ್ತು. ಕಾರ್ಯಕ್ರಮದ ಆಯೋಜಕರು ಸಮಾವೇಶಕ್ಕೆ ಆಗಮಿಸಿದ ಜನರಿಗೆ ನೀರಿನ ವ್ಯವಸ್ಥೆ ಮಾಡಿರಲಿಲ್ಲ. ಇದರಿಂದ ಬಿಸಿಲ ಝಳಕ್ಕೆ ಜನರು ಕುಡಿಯುವ ನೀರಿಗೆ ಪರದಾಡಿದ್ದರು. ಸಮಾವೇಶದ ಸ್ಥಳಕ್ಕೆ ಸಮೀರ್ ಹಸನ್ ಸಾಬ್ ಎಂಬುವವರು ತಂಪು ಪಾನೀಯ ವಾಹನದೊಂದಿಗೆ ಆಗಮಿಸಿದ್ದರು. ಇದನ್ನು ಕಂಡ ಜನರು ವಾಹನದ ಮೇಲೆ ಮುಗಿ ಬಿದ್ದು ತಂಪು ಪಾನೀಯ ಕೊಂಡೊಯ್ದಿದ್ದರು. ಯಾರೊಬ್ಬರೂ ಸರಿಯಾಗಿ ಹಣ ಪಾವತಿಸದೇ ಕೂಲ್ ಡ್ರಿಂಕ್ಸ್ ಕೊಂಡೊಯ್ದ ಕಾರಣ ವ್ಯಾಪಾರಿ ಸಮೀರ್ ಗೆ 35 ಸಾವಿರ ರೂಪಾಯಿ ನಷ್ಟವುಂಟಾಗಿತ್ತು. ಇದರಿಂದ ಸಾಮಾಜಿಕ ಜಾಲತಾಣಗಳಲ್ಲಿ ತನಗಾದ ನಷ್ಟದ ಬಗ್ಗೆ ಹೇಳಿಕೊಂಡು ಹಸನ್ ಸಾಬ್ ಕಣ್ಣೀರಿಟ್ಟಿದ್ದರು.
ಇದನ್ನು ಗಮನಿಸಿದ ಸಂಸದ ಪ್ರತಾಪ್ ಸಿಂಹ ಸಮೀರ್ ಹಸನ್ ಸಾಬ್ ಅವರಿಗೆ 35 ಸಾವಿರ ರೂಪಾಯಿ ಹಣ ಸಂದಾಯ ಮಾಡಿ ನಷ್ಟ ಬರಿಸಿ ಮಾನವೀಯತೆ ಮೆರೆದಿದ್ದಾರೆ. ಈ ಬಗ್ಗೆ ಸಂಸದ ಪ್ರತಾಪ್ ಸಿಂಹ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.