ಅಸ್ಸಾಂನ ಸೋನಿತ್‌ಪುರ್ ಜಿಲ್ಲೆಯಲ್ಲಿ ತಮ್ಮ ವಾಹನದ ಮೇಲೆ ದಾಳಿ ನಡೆಸಲಾಗಿದೆ. ಪಕ್ಷದ ‘ಭಾರತ್ ಜೋಡೋ ನ್ಯಾಯ್ ಯಾತ್ರೆ’ಯ ಜೊತೆಯಲ್ಲಿದ್ದ ಮಾಧ್ಯಮದವರ ಮೇಲೆ ದುಷ್ಕರ್ಮಿಗಳು ದಾಳಿ ಮಾಡಿದ್ದಾರೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಭಾನುವಾರ ಹೇಳಿದ್ದಾರೆ.
ಕೆಲವು ನಿಮಿಷಗಳ ಹಿಂದೆ ಸುನೀತ್ ಪುರದ ಜುಮುಗುರಿಹತ್ ನಲ್ಲಿ ನನ್ನ ವಾಹನದ ಮೇಲೆ ಅಶಿಸ್ತಿನ ಬಿಜೆಪಿ ಗುಂಪು ದಾಳಿ ಮಾಡಿತು, ಅವರು ಭಾರತ್ ಜೋಡೋ ನ್ಯಾಯ್ ಯಾತ್ರಾ ಸ್ಟಿಕ್ಕರ್‌ಗಳನ್ನು ವಿಂಡ್ ಶೀಲ್ಡ್ ನಿಂದ ಹರಿದು ಹಾಕಿದರು. ಅವರು ನೀರು ಎರಚಿದರು. ಕಾಂಗ್ರೆಸ್ ವಿರುದ್ಧ ಘೋಷಣೆಗಳನ್ನು ಕೂಗಿದರು. ಆದರೆ ನಾವು ನಮ್ಮ ಸಂಯಮವನ್ನು ಉಳಿಸಿಕೊಂಡಿದ್ದೇವೆ, ಕೈ ಬೀಸಿದ್ದೇವೆ. ಪುಂಡ ಪೋಕರಿಗಳು ಓಡಿಹೋದರು. ಇದನ್ನು ನಿಸ್ಸಂದೇಹವಾಗಿ ಅಸ್ಸಾಂ ಸಿಎಂ ಹಿಮಂತ್ ಬಿಸ್ವಾ ಅವರು ಮಾಡಿಸುತ್ತಿದ್ದಾರೆ. ನಾವು ಬೆದರುವುದಿಲ್ಲ. ಸೈನಿಕರಾಗಿ ಮುಂದುವರಿಯುತ್ತೇವೆ ಎಂದು ಜೈರಾಮ್ ರಮೇಶ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಅಖಿಲ ಭಾರತ ಕಾಂಗ್ರೆಸ್ ಸಮಿತಿ(ಎಐಸಿಸಿ) ಸಂವಹನ ಸಂಯೋಜಕ ಮಹಿಮಾ ಸಿಂಗ್ ಮಾತನಾಡಿ, ‘ರಮೇಶ್ ಜಿ ಮತ್ತು ಕೆಲವರ ಕಾರ್ ಜಮುಗುರಿಘಾಟ್ ಬಳಿ ಪ್ರಮುಖ ಯಾತ್ರಾ ಪರಿವಾರವನ್ನು ಸೇರಲು ತೆರಳುತ್ತಿದ್ದಾಗ ದಾಳಿಗೆ ಒಳಗಾಯಿತು. ತಮ್ಮ ಪಕ್ಷದ ಮುಖಂಡರು ಪೊಲೀಸರಿಗೆ ಮಾಹಿತಿ ನೀಡಿದ್ದು, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸ್ಥಳದಲ್ಲಿ ಇದ್ದರು ಎಂದು ಹೇಳಿದ್ದಾರೆ.
ವಾಹನದಿಂದ ನ್ಯಾಯ್ ಯಾತ್ರಾ ಸ್ಟಿಕ್ಕರ್‌ಗಳನ್ನು ಹರಿದು ಹಾಕಲಾಯಿತು ಮತ್ತು ದಾಳಿಕೋರರು ವಾಹನದ ಮೇಲೆ ಬಿಜೆಪಿ ಧ್ವಜವನ್ನು ಹಾಕಲು ಪ್ರಯತ್ನಿಸಿದರು, ಬಹುತೇಕ ಹಿಂಬದಿಯ ಗಾಜು ಒಡೆದಿದ್ದಾರೆ ಎಂದು ತಿಳಿಸಿದ್ದಾರೆ.
“ಯಾತ್ರೆಯನ್ನು ಕವರ್ ಮಾಡುತ್ತಿದ್ದ ವ್ಲಾಗರ್‌ನ ಕ್ಯಾಮರಾ, ಬ್ಯಾಡ್ಜ್ ಮತ್ತು ಇತರ ಉಪಕರಣಗಳನ್ನು ಕಸಿದುಕೊಳ್ಳಲಾಗಿದೆ. ಪಕ್ಷದ ಸಾಮಾಜಿಕ ಮಾಧ್ಯಮ ತಂಡದ ಸದಸ್ಯರ ಮೇಲೆ ಸಹ ಹಲ್ಲೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ರಾಹುಲ್ ಗಾಂಧಿ ನೇತೃತ್ವದ ಯಾತ್ರೆ ರಾಜ್ಯದಲ್ಲಿ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಬಿಸ್ವಂತ್ ಜಿಲ್ಲೆಯಿಂದ ಸೋನಿತ್ ಪುರ ಮೂಲಕ ನಾಗಾವ್ ಕಡೆಗೆ ಸಾಗಿದೆ.