ಶಿವಮೊಗ್ಗ: ಭದ್ರಾ ಜಲಾಶಯದ ಎಡದಂಡೆ ನಾಲೆಗೆ ಜ.10 ರಿಂದ ಮತ್ತು ಬಲದಂಡೆ ನಾಲೆ ಜ.20 ರಿಂದ ನೀರು ಹರಿಸಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಮಧು ಬಂಗಾರಪ್ಪ ತಿಳಿಸಿದರು.
ಮಲವಗೊಪ್ಪದ ಭದ್ರಾ ಅಚ್ಚುಕಟ್ಟು ಅಭಿವೃದ್ದಿ ಪ್ರಾಧಿಕಾರ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ 2023-24 ನೇ ಸಾಲಿನ ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು ಅಧಿಕಾರಿಗಳು ಮತ್ತು ರೈತ ಮುಖಂಡರೊಂದಿಸಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.
ಎಡದಂಡ ನಾಲೆಗೆ ಜ.10 ರಿಂದ ನೀರು ಹರಿಸಲಾಗುತ್ತಿದ್ದು, ಆನ್ ಮತ್ತು ಆಫ್ ಮಾದರಿ ಅನುಸರಿಸಲಾಗುವುದು. ಜ.10 ರಿಂದ 16 ದಿನ ಆನ್ ಮತ್ತು 15 ದಿನ ಆಫ್, ನಂತರ 17 ದಿನ ಆನ್, 15 ದಿನ ಆಫ್, 18 ದಿನ ಆನ್ 15 ದಿನ ಆಫ್ ಮತ್ತು 20 ದಿನ ಆನ್, 15 ದಿನ ಆಫ್ ಇರುತ್ತದೆ.
ಬಲದಂಡ ನಾಲೆಗೆ ಜ.20 ರಿಂದ ನೀರು ಹರಿಸಲಾಗುತ್ತಿದ್ದು ಮೊದಲಿಗೆ 12 ದಿನ ಆನ್, 20 ದಿನ ಆಫ್, 12 ದಿನ ಆನ್ 20 ದಿನ ಆಫ್, 14 ದಿನ ಆನ್ 20 ದಿನ ಆಫ್ ಮತ್ತು 15 ದಿನ ಆನ್ 20 ದಿನ ಆಫ್ ಇರುತ್ತದೆ ಎಂದರು.
ಪ್ರಸಕ್ತ ಸಾಲಿನಲ್ಲಿ ಸಾಕಷ್ಟು ಪ್ರಮಾಣದ ಮಳೆಯಾಗದ ಕಾರಣ ಭದ್ರಾ ಜಲಾಶಯದಲ್ಲಿ ನೀರಿನ ಕೊರತೆಯಾಗಿದೆ. ಜಲಾಶಯದ ಗರಿಷ್ಟ ನೀರಿನ ಸಂಗ್ರಹಣಾ ಮಟ್ಟ 186 ಅಡಿ, ಪ್ರಸ್ತುತ 35.370 ಅಡಿ ಸಂಗ್ರಹವಿದೆ. ಪ್ರಸ್ತತ ಜಲಾಶಯದಲ್ಲಿ ನೀರಾವರಿ ಬಳಕೆಗೆ ಬರುವ 12.50 ಟಿಎಂಸಿ ಪ್ರಮಾಣದ ನೀರನ್ನು ಬಲದಂಡ ನಾಲೆಗೆ 2650 ಕ್ಯೂಸೆಕ್ಸ್ ಮತ್ತು ಎಡದಂಡ ನಾಲೆಗೆ 380 ಕ್ಯೂಸೆಕ್ಸ್ ಮತ್ತು ಗೊಂದಿ ನಾಲೆ ಸೇರಿದಂತೆ ಪ್ರತಿದಿನ 0.27 ಟಿಎಂಸಿ ನೀರು ಹರಿಸಿದಲ್ಲಿ ಒಟ್ಟು 47 ದಿನಗಳಿಗೆ ನೀರು ಹರಿಸಬಹುದಾಗಿದೆ.