ಕಾಸ್ಮೆಟಿಕ್ ಸರ್ಜನ್ ಒಬ್ಬರು ತಮಗೆ ಸಿಸಿ ಟಿವಿ ಕ್ಯಾಮೆರಾ ಆನ್ ಮಾಡಿಕೊಂಡು ಚಿಕಿತ್ಸೆ ನೀಡಿದ್ದಾರೆ ಎಂದು ಆಪಾದಿಸಿ 18 ವರ್ಷದ ಯುವತಿಯೊಬ್ಬಳು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಯುವತಿ ಕೊಟ್ಟ ದೂರಿನ ಮೇಲೆ, ಐಟಿ ಕಾಯಿದೆ ಅಡಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ವಿದ್ಯಾರ್ಥಿನಿ ಸುಮಾ (ಹೆಸರು ಬದಲಿಸಲಾಗಿದೆ) ರಾಜಾಜಿನಗರದ ಡಾ. ಶೆಟ್ಟೀಸ್ ಕಾಸ್ಮೆಟಿಕ್ ಕೇಂದ್ರಕ್ಕೆ ಮೇ 20ರಂದು ಭೇಟಿ ನೀಡಿದ್ದಾರೆ. ಈ ವೇಳೆ ಹೊಟ್ಟೆಯಲ್ಲಿನ ಬೊಜ್ಜು ಕರಗಿಸುವ ಸಂಬಂಧ ಆಕೆ ವೈದ್ಯರೊಂದಿಗೆ ಮಾತನಾಡಿದ್ದಾರೆ.
ಬಳಿಕ ಸುಮಾಳನ್ನು ಇಬ್ಬರು ನರ್ಸ್‌ಗಳೊಂದಿಗೆ ಕೋಣೆಯೊಂದಕ್ಕೆ ಕರೆದೊಯ್ದ ಡಾ ಶೆಟ್ಟಿ, ಆಕೆಯ ಟಾಪ್ ತೆಗೆಯಿಸಿ ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಕೋಣೆಯಲ್ಲಿ ಸಿಸಿಟಿವಿ ಇದ್ದಿದ್ದನ್ನು ಸುಮಾ ಗಮನಸಿದ್ದು, ಈ ಸಂಬಂಧ ಪೊಲೀಸರಿಗೆ ದೂರು ಕೊಟ್ಟಿದ್ದಾರೆ.
ಮಾರನೇ ದಿನ ಸುಮಾಳ ಸಹೋದರ ಕಾಸ್ಮೆಟಿಕ್ ಕೇಂದ್ರಕ್ಕೆ ಕರೆ ಮಾಡಿ ತನ್ನ ಸಹೋದರಿ ಇರುವ ಸಿಸಿಟಿವಿ ತುಣುಕುಗಳನ್ನು ಡಿಲೀಟ್ ಮಾಡಲು ಕೋರಿದ್ದಾರೆ. ಆದರೆ ಇದಕ್ಕೆ ಕಾಸ್ಮೇಟಿಕ್ ಕೇಂದ್ರದ ಆಡಳಿತ ನಿರಾಕರಣೆ ತೋರಿದ್ದು, ಸಿಸಿ ಟಿವಿ ಕ್ಯಾಮೆರಾಗಳ ಸಂಬಂಧ ಸರ್ಕಾರೀ ಆದೇಶಗಳನ್ನು ತಾನು ಪಾಲಿಸುತ್ತಿರುವುದಾಗಿ ತಿಳಿಸಿದೆ.
“ರೋಗಿಯ ಕಡೆಯವರು ಈ ಸಂಬಂಧ ನಮ್ಮನ್ನು ಭಾನುವಾರ ಸಂಪರ್ಕಿಸಿದ್ದಾರೆ. ಆದರೆ ಆ ದಿನ ನಮ್ಮ ಕಾಸ್ಮೆಟಿಕ್ ಕೇಂದ್ರಕ್ಕೆ ರಜೆ ಇರುತ್ತದೆ. ಪೊಲೀಸರು ಸೋಮವಾರ ಬಂದು ಡಿವಿಆರ್ ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರಕರಣ ತನಿಖೆಯಲ್ಲಿದೆ. ಕೋವಿಡ್-19 ಸೋಂಕಿನ ವಿಪರೀತ ದಿನಗಳ ಸಂದರ್ಭ, ಮೇ 7, 2021ರಲ್ಲಿ, ಸರ್ಕಾರ ಹೊರಡಿಸಿದ ಆದೇಶಾನುಸಾರ, ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತಗಳ ಅಡಿಯಲ್ಲಿ ಬರುವ ಎಲ್ಲಾ ವಾರ್ಡ್‌ಗಳ ಆಸ್ಪತ್ರೆಗಳು ಹಾಗೂ ಐಸಿಯುಗಳಲ್ಲಿ ಸಿಸಿಟಿವಿ ಅಳವಡಿಕೆ ಕಡ್ಡಾಯವಾಗಿದೆ,” ಎಂದು ಡಾ. ಶೆಟ್ಟಿ ತಿಳಿಸಿದ್ದಾರೆ.
“ನಾವು ಡಿವಿಆರ್ ಅನ್ನು ಕೊರ್ಟ್‌ಗೆ ನೀಡಿದ್ದೇವೆ. ಈಗ ಆ ವಿಡಿಯೋವನ್ನು ಡಿಲೀಟ್ ಮಾಡಲು ಸಾಧ್ಯವಿಲ್ಲ. ಎಫ್‌ಐಆರ್ ದಾಖಲಿಸಿದ ಬಳಿಕ ಹಾಗೆ ಮಾಡಿದರೆ ಅದು ಸಾಕ್ಷ್ಯ ನಾಶ ಪಡಿಸಿದಂತಾಗುತ್ತದೆ,” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.