ಬೆಂಗಳೂರು: ಮಹತ್ವದ ಕಾರ್ಯಾಚರಣೆ ನಡೆಸಿರುವ ಸಿಸಿಬಿ ಪೊಲೀಸರು ಬೆಂಗಳೂರಿನಲ್ಲಿ ಅಂತರಾಷ್ಟ್ರೀಯ ಮಟ್ಟದ ಕ್ರಿಮಿನಲ್ ಗಳನ್ನು ಬಂಧಿಸಿದ್ದಾರೆ. ಶ್ರೀಲಂಕಾದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಗಳನ್ನು ಬಂಧಿಸಲಾಗಿದೆ. ಇವರೊಂದಿಗೆ ಆಶ್ರಯ ನೀಡಿದ ವ್ಯಕ್ತಿಯನ್ನು ಕೂಡ ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಶ್ರೀಲಂಕಾದ ಕಾಸಿನ್ ಕುಮಾರ್, ಅಮಿಲ ನುವಾನ್, ರಂಗ ಪ್ರಸಾದ್ ಬಂಧಿತ ಆರೋಪಿಗಳಾಗಿದ್ದಾರೆ. ಇವರಿಗೆ ಆಶ್ರಯ ನೀಡಿದ ಜೈ ಪರಮೇಶ್ ಅಲಿಯಾಸ್ ಜಾಕ್ ಎಂಬುವನನ್ನು ಕೂಡ ಬಂಧಿಸಲಾಗಿದೆ. ಕೊಲೆ ಆರೋಪಿಯಾಗಿರುವ ಜೈಪರಮೇಶ್ ಯಲಹಂಕದ ವಿಶ್ವ ಪ್ರಕೃತಿ ಅಪಾರ್ಟ್ಮೆಂಟ್ ನಲ್ಲಿ ಶ್ರೀಲಂಕಾ ಪಾತಕಿಗಳಿಗೆ ಆಶ್ರಯ ಕಲ್ಪಿಸಿದ್ದ.
ಶ್ರೀಲಂಕಾದಲ್ಲಿ ಕಾಸಿನ್ ಕುಮಾರ್ ವಿರುದ್ಧ 4 ಕೊಲೆ, ಅಮಿಲ ನುವಾನ್ ವಿರುದ್ಧ 5 ಕೊಲೆ ಪ್ರಕರಣಗಳು ದಾಖಲಾಗಿದ್ದು, ರಂಗಪ್ರಸಾದ್ ವಿರುದ್ಧವೂ ಹಲ್ಲೆ, ಕೊಲೆ ಪ್ರಕರಣ ಇರುವ ಮಾಹಿತಿ ಗೊತ್ತಾಗಿದೆ. ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು ನಾಲ್ವರನ್ನು ಬಂಧಿಸಿ 13 ಮೊಬೈಲ್, ಶ್ರೀಲಂಕಾದ ವಿವಿಧ ವಿಸಿಟಿಂಗ್ ಕಾರ್ಡ್, ಬಸ್ ಟಿಕೆಟ್, ಪೇಪರ್ ಕಟಿಂಗ್ಸ್, ಮನೆ ಬಾಡಿಗೆ ಕರಾರು ಪತ್ರ, ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಸೇರಿದಂತೆ ಹಲವು ದಾಖಲೆ ಪಡೆದುಕೊಂಡಿದ್ದಾರೆ.
ಓಮನ್ ದೇಶದಲ್ಲಿ ಬಂದಿತನಾಗಿರುವ ಜಲಾನ್ ಎಂಬ ವ್ಯಕ್ತಿಯ ಆದೇಶದ ಮೇರೆಗೆ ಇವರು ಬೆಂಗಳೂರಿನಲ್ಲಿ ವಾಸವಾಗಿದ್ದರು. ಶ್ರೀಲಂಕಾ, ಭಾರತ ಮತ್ತು ಪಾಕಿಸ್ತಾನದೊಂದಿಗೆ ನಂಟು ಹೊಂದಿರುವ ಜಲಾನ್ ಡ್ರಗ್ಸ್ ಟ್ರಾಫಿಕಿಂಗ್ ನಡೆಸುತ್ತಿದ್ದ. ಶ್ರೀಲಂಕಾದ ಎಲ್‌ಟಿಟಿಗೆ ಸೇರಿದ ಈ ಮೂವರು ಮೋಸ್ಟ್ ವಾಂಟೆಡ್ ಕ್ರಿಮಿನಲ್ ಗಳಾಗಿದ್ದಾರೆ. ಶ್ರೀಲಂಕಾದಿಂದ ಭಾರತಕ್ಕೆ ಬೋಟ್ ನಲ್ಲಿ ಬಂದಿದ್ದಾರೆ. 20 ದಿನಗಳ ಹಿಂದೆ ಬೋಟ್ ನಲ್ಲಿ ಚೆನ್ನೈ ಸಮುದ್ರ ತೀರಕ್ಕೆ ಬಂದು ಅಲ್ಲಿಂದ ರಸ್ತೆ ಮಾರ್ಗವಾಗಿ ಬೆಂಗಳೂರಿಗೆ ಬಂದು ನೆಲೆಸಿದ್ದರು ಎನ್ನಲಾಗಿದೆ.