ದೀಪಾವಳಿ ಹತ್ತಿರ ಬರ್ತಿದೆ. ಎಲ್ಲೆಡೆ ತಯಾರಿ ಜೋರಾಗಿ ನಡೆದಿದೆ. ದೀಪಾವಳಿ ಸಂದರ್ಭದಲ್ಲಿ ಮನೆಯನ್ನು ಸ್ವಚ್ಛಗೊಳಿಸುವ ಪದ್ಧತಿ ಅನೇಕ ಕಡೆ ಚಾಲ್ತಿಯಲ್ಲಿದೆ. ಭಾರತದಲ್ಲಿ ಪ್ರತಿ ದಿನ ಮನೆ ಸ್ವಚ್ಛಗೊಳಿಸುವ ರೂಢಿಯಿದೆ. ಆದ್ರೆ ದೀಪಾವಳಿ ಸಂದರ್ಭದಲ್ಲಿ ಹೆಚ್ಚುವರಿ ಕ್ಲೀನಿಂಗ್ ನಡೆಯುತ್ತದೆ. ಬೇಡದ ವಸ್ತುಗಳನ್ನು ಹೊರಗೆ ಹಾಕಿ, ಮನೆಯ ಮೂಲೆ ಮೂಲೆಗಳನ್ನು ಸ್ವಚ್ಛಗೊಳಿಸಲಾಗುತ್ತದೆ. ದೀಪಾವಳಿ ಸಂದರ್ಭದಲ್ಲಿ ಅನೇಕ ಪದ್ಧತಿಗಳು ಜಾರಿಯಲ್ಲಿದ್ದು, ಅದ್ರಲ್ಲಿ ಒಂದಾಗಿರುವ ಮನೆ ಕ್ಲೀನಿಂಗ್ ನಿಂದ ಲಾಭವಿದೆ.
ಮನೆ ಸ್ವಚ್ಛಗೊಳಿಸೋದ್ರಿಂದ ನಿಮ್ಮ ಮಾನಸಿಕ ಹಾಗೂ ದೈಹಿಕ ಶುದ್ಧಿಯಾಗುತ್ತದೆ. ಉಚ್ಛ ಶಕ್ತಿಯನ್ನು ಸ್ವಾಗತಿಸಲು ಇದು ನೆರವಾಗುತ್ತದೆ. ದೀಪಾವಳಿ ಸಂದರ್ಭದಲ್ಲಿ ಮನೆ ಸ್ವಚ್ಛಗೊಳಿಸುವುದ್ರಿಂದ ಮನೆ ಕೂಡ ತುಂಬ ಸುಂದರವಾಗಿ ಕಾಣುತ್ತದೆ. ಒಂದು ಶುದ್ಧವಾದ ಮನೆ ಸಕಾರಾತ್ಮಕ ಶಕ್ತಿಯನ್ನು ಸೆಳೆಯುತ್ತದೆ. ಸ್ವಚ್ಛವಾಗಿರುವ ಮನೆಯನ್ನು ನೋಡಿದ್ರೆ ಮನಸ್ಸಿಗೆ ನೆಮ್ಮದಿ ಎನ್ನಿಸುತ್ತದೆ.
ಶುದ್ಧವಾದ ಮನೆಗೆ ಧನ ಹಾಗೂ ಸಮೃದ್ಧಿಯ ದೇವಿ ಲಕ್ಷ್ಮಿ ಬರ್ತಾಳೆ ಎಂಬ ನಂಬಿಕೆ ಇದೆ. ಸ್ವಚ್ಛವಾಗಿರುವ ಮನೆಯಲ್ಲಿ ಲಕ್ಷ್ಮಿ ಸದಾ ನೆಲೆಸಿರುತ್ತಾಳೆ. ಇದ್ರಿಂದ ಸದಾ ಸಂಪತ್ತು ಮನೆಯಲ್ಲಿ ತುಂಬಿ ತುಳುಕುತ್ತಿರುತ್ತದೆ.
ದೀಪಾವಳಿ ಸಂದರ್ಭದ ಸ್ವಚ್ಛತೆ ವೇಳೆ ನೀವು ಮನೆಯಲ್ಲಿರುವ ಹಾಳಾದ ವಸ್ತುಗಳನ್ನು, ಒಡೆದ ಗ್ಲಾಸುಗಳನ್ನು ಮನೆಯಿಂದ ಹೊರಗೆ ಹಾಕ್ಬೇಕು. ಇವೆಲ್ಲ ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತವೆ. ನೀವು ಮನೆಯಲ್ಲಿ ಸ್ವಚ್ಛವಾಗಿಟ್ಟುಕೊಂಡಲ್ಲಿ ನಕಾರಾತ್ಮಕ ಶಕ್ತಿ ಮನೆ ಪ್ರವೇಶ ಮಾಡೋದಿಲ್ಲ.
ದೀಪಾವಳಿ ಸಂದರ್ಭದಲ್ಲಿ ನೀವು ಮನೆಯನ್ನು ಸ್ವಚ್ಛಗೊಳಿಸಿದ್ರೆ ನೀವು ಪರಂಪರೆ ಪಾಲನೆ ಮಾಡಿದಂತಾಗುತ್ತದೆ. ಇದು ನಿಮ್ಮ ಮನಸ್ಸಿಗೆ ನೆಮ್ಮದಿ ನೀಡುವುದಲ್ಲದೆ, ಮನೆಯಲ್ಲಿ ಸುಂದರವಾಗಿ ಅಲಂಕರಿಸಲು ಕ್ಲೀನಿಂಗ್ ಮೊದಲ ಮೆಟ್ಟಿಲಾಗುತ್ತದೆ.
ದೀಪಾವಳಿ ಸಂದರ್ಭದಲ್ಲಿ ಮನೆಗೆ ಸಂಬಂಧಿಕರು, ಆಪ್ತರು, ಸ್ನೇಹಿತರು ಬರ್ತಾರೆ. ಅವರನ್ನು ಸ್ವಚ್ಛವಾದ ಮನೆ ಸ್ವಾಗತಿಸಿದ್ರೆ ಹಬ್ಬದ ಸಂಭ್ರಮ ದುಪ್ಪಟ್ಟಾಗುತ್ತದೆ.