ಮದುವೆ ಮನೆ ಅಂದರೆ ಸಾಕು ಅಲ್ಲಿ ಅತಿಥಿಗಳು ಇರುವುದು ಸರ್ವೇ ಸಾಮಾನ್ಯ. ಅದರಲ್ಲೂ ಅತಿಥಿಗಳ ಸಂಖ್ಯೆ ಹೆಚ್ಚಾಗಿದ್ದಷ್ಟು ಮದುವೆ ಮನೆಗೆ ಕಳೆ ಇನ್ನಷ್ಟು ಹೆಚ್ಚಾಗಿರುತ್ತೆ. ಇನ್ನೂ ಮದುವೆಗೆ ಬಂದ ಅತಿಥಿಗಳಿಗೆಂದೇ ಭಿನ್ನ-ಭಿನ್ನ ಬಗೆಯ ಖಾದ್ಯಗಳನ್ನ ತಯಾರಿಸಲಾಗುತ್ತೆ. ಎಲ್ಲ ಸೇರಿದಾಗ ಒಟ್ಟಿಗೆ ಕೂತು, ಹರಟೆ ಹೊಡೆಯುತ್ತ, ಇವುಗಳನ್ನ ತಿಂದು ಚಪ್ಪರಿಸಿದಾಗ ಸಿಗೋ ಮಜಾನೇ ಬೇರೆ.
ಅಮೆರಿಕದಲ್ಲೂ ಇತ್ತೀಚೆಗೆ ಭರ್ಜರಿಯಾಗಿ ಒಂದು ಮದುವೆ ನಡೆದಿತ್ತು. ಈ ಮದುವೆಗೆ ವಿಶೇಷ ಅತಿಥಿಯೊಬ್ಬರು ಆಗಮಿಸಿದ್ದರು. ಅವರಿಗೆ ಆಹ್ವಾನವೇ ನೀಡಿರಲಿಲ್ಲ, ಆದರೂ ಅವರು ನೇರವಾಗಿ ಮದುವೆ ಮನೆಗೆ ನುಗ್ಗಿ ಬಂದಿದ್ದರು. ಅವರನ್ನ ನೋಡಿ ವಧು-ವರ ಅಷ್ಟೆ ಅಲ್ಲ, ಅಲ್ಲಿದ್ದವರೆಲ್ಲ ದಂಗಾಗಿದ್ದರು. ಆದರೆ ಆ ಅತಿಥಿ ಯಾರನ್ನೂ ಕೇರ್ ಮಾಡದೇ ನೇರವಾಗಿ, ಅಡುಗೆ ತಯಾರಿಸಿ ಇಟ್ಟಿದ್ದ ಕಡೆಗೆ ಹೋಗಿ ತನಗೆ ಇಷ್ಟವಾಗಿದ್ದ ಸಿಹಿ ತಿಂಡಿಗಳನ್ನ ತಿಂದು ಚಪ್ಪರಿಸಿತ್ತು. ಅಷ್ಟಕ್ಕೂ ಆ ಅತಿಥಿ ಯಾರು ಅಂತಿರಾ…..? ಕಾಡಿನಲ್ಲಿ ಬಿಂದಾಸ್ ಆಗಿ ಓಡಾಡೋ ಕರಡಿ.
ಅದು ಮೆಕ್ರೊಸ್ಸಿ-ಮಾರ್ಟಿನೆಜ್ ಮದುವೆ ಸಂದರ್ಭ. ಕೊಲೊರಾಡೋದ ಬೌಲ್ಡ್ ಕೌಂಟಿಯಲ್ಲಿ ಭರ್ಜರಿಯಾಗಿ ಮದುವೆ ಸಿದ್ಧತೆಯನ್ನ ಮಾಡಲಾಗಿತ್ತು. ಇನ್ನೇನು ವರ ವಧುವಿಗೆ ಉಂಗುರ ತೊಡಿಸುವುದೊಂದೇ ಬಾಕಿ, ಅದೇ ಸಮಯದಲ್ಲಿ ಕರಡಿಯೊಂದು ಒಮ್ಮಿಂದೊಮ್ಮೆ ನುಗ್ಗಿ ಬಂದಿತ್ತು. ಮದುವೆಗೆ ಬಂದ ಅತಿಥಿಗಳೆಲ್ಲ ಕರಡಿ ನೋಡಿ ಶಾಕ್ ಆಗಿದ್ದರು. ಆದರೆ ಆ ಕರಡಿ ಮಾತ್ರ ಯಾರಿಗೂ ಏನೂ ಮಾಡದೇ ಅಲ್ಲಿ ಮಾಡಿಟ್ಟಿದ್ದ ಸಿಹಿ ತಿಂಡಿಗಳನ್ನ ತಿಂದು ಕೊನೆಗೆ ತನ್ನ ಪಾಡಿಗೆ ತಾನು ಹೊರಟು ಹೋಗಿದೆ.
ಮದುವೆ ಸಮಯದಲ್ಲಿ ಆದ ಭಯಾನಕ ಅನುಭವವನ್ನ ಮಾರ್ಟಿನೆಜ್ ತಮ್ಮ ಫೇಸ್ಬುಕ್ ಅಕೌಂಟ್ನಲ್ಲಿ ಫೋಟೋ ಶೇರ್ ಮಾಡಿಕೊಳ್ಳುವ ಮೂಲಕ ಹಂಚಿಕೊಂಡಿದ್ದಾರೆ. ಅದಕ್ಕೆ ಶೀರ್ಷಿಕೆಯಲ್ಲಿ’ ಕೊನೆಗೂ ಮದುವೆಗೆ ಬಂದ ಕರಡಿ ಸಿಹಿ ತಿಂದು ಹೋಗಿದೆ’ ಎಂದು ಬರೆದಿದ್ದಾರೆ. ಆದರೆ ಒಂದಂತೂ ಸತ್ಯ ಕರಡಿ ಇರುವಷ್ಟು ಸಮಯ ಆ ಮದುವೆಯಲ್ಲಿದ್ದವರಿಗೆಲ್ಲರಿಗೂ ಜೀವ ಬಾಯಿಗೆ ಬಂದಿದ್ದಂತೂ ಸುಳ್ಳಲ್ಲ.