ಹಾವೇರಿ: ಬಿಜೆಪಿ 200 ಸೀಟು ಗೆಲ್ಲುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿರುವುದು ಹಾಸ್ಯಾಸ್ಪದವಾಗಿದೆ ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಹಾವೇರಿ ಜಿಲ್ಲೆಯ ಹಿರೆಕೆರೂರಿನಲ್ಲಿ ಮಾತನಾಡಿದ ಮಾಜಿ ಸಿಎಂ ಬೊಮ್ಮಾಯಿ, ಕಾಂಗ್ರೆಸ್ ಸ್ಪರ್ಧೆ ಮಾಡಿದ್ದೇ 200 ಸ್ಥಾನಗಳಲ್ಲಿ, ಅದರಲ್ಲಿ ಕಾಂಗ್ರೆಸ್ ಎಷ್ಟು ಸ್ಥಾನ ಗೆಲ್ಲುತ್ತದೆ ಅನ್ನುವುದನ್ನು ಸಿಎಂ ಸಿದ್ದರಾಮಯ್ಯ ಹೇಳಲಿ ಎಂದು ಆಗ್ರಹಿಸಿದ್ದಾರೆ.
ಇಡೀ ದೇಶದಲ್ಲಿ 543 ಲೋಕಸಭಾ ಕ್ಷೇತ್ರದಲ್ಲಿ ಕೇವಲ 200 ಸ್ಥಾನಗಳಲ್ಲಿ ಸ್ಪರ್ಧಿಸಿರುವ ಕಾಂಗ್ರೆಸ್ ನವರು ದೇಶ ಆಳುತ್ತೇವೆ ಅಂತ ಹೇಳುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ಟೀಕಿಸಿದರು.
ನಮ್ಮ ನಾಯಕ ನರೇಂದ್ರ ಮೋದಿ ಅವರ ನಾಯಕತ್ವಕ್ಕೆ ಮೆಚ್ಚಿ ದೇಶದಲ್ಲಿ ಬಿಜೆಪಿ 400 ಸೀಟು ಬರುತ್ತವೆ ಎಂದು ಎಲ್ಲ ಸಮೀಕ್ಷೆಗಳು ಹೇಳುತ್ತಿವೆ. ಅದರಿಂದ ಭಯಗೊಂಡ ಕಾಂಗ್ರೆಸ್ಸಿಗರು ಜನರ ದಾರಿ ತಪ್ಪಿಸಲು ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ ಎಂದರು.
ಒಬ್ಬ ಸಚಿವರು ಮೋದಿ, ಮೋದಿ ಎಂದು ಕೂಗುವವರ ಕಪಾಳಕ್ಕೆ ಹೊಡೆಯಿರಿ ಎಂದು ಹೇಳಿದರು. ಈಗ ಅವರು ಹೋದಲೆಲ್ಲಾ ಮೋದಿ ಮೋದಿ ಎಂಬ ಕೂಗು ಹೆಚ್ಚಾಗಿದೆ. ಯಾರು ಮೋದಿಯನ್ನು ಟೀಕಿಸುತ್ತಾರೊ ಅವರ ಜನಪ್ರೀಯತೆ ಹೆಚ್ಚಾಗಿದೆ. ಗುಜರಾತ್ ನಲ್ಲಿ ಮೋದಿಯವರು ಸಿಎಂ ಆಗಿದ್ದಾಗ ಸೋನಿಯಾಗಾಂಧಿ ಮೌತ್ ಕಾ ಸೌದಾಗರ್ ಎಂದರು ಅಲ್ಲಿ ಮೋದಿಯವರು ಹೆಚ್ಚಿನ ಸ್ಥಾನ ಗೆದ್ದು ಸಿಎಂ ಆದರು, ಮಣಿಶಂಕರ ಅಯ್ಯರ್ ಅಂತ ಒಬ್ಬ ಕಾಂಗ್ರೆಸ್ ಲೀಡರ್ ಮೋದಿ ಚಾ ಮಾರುವ ಹುಡುಗ ಅಂದರು, ಇಡಿ ದೇಶದ ಜನರು ಮೋದಿಯವರ ಪರವಾಗಿ ನಿಂತು ಪ್ರಧಾನಮಂತ್ರಿ ಮಾಡಿದರು. ಬಿಹಾರ್ ದ ಲಾಲೂ ಪ್ರಸಾದ್ ಯಾದವ್ ಮೋದಿಗೆ ಪರಿವಾರ ಇಲ್ಲ ಅಂದರು, ಇಡಿ ದೇಶವೇ ಅವರ ಪರಿವಾರ ಅಂತ ಎದ್ದು ನಿಂತರು ಎಂದು ಹೇಳಿದರು.
ಮತ್ತೊಮ್ಮೆ ಮೋದಿ ಬಂದರೆ ಅವರು ಮಾಡಿರುವ ಭ್ರಷ್ಟಾಚಾರ ಹೊರಗೆ ಬಂದು ಅವರು ಒಳಗೆ ಹೋಗುವ ಭಯ ಇದೆ. ಹೀಗಾಗಿ ಕಾಂಗ್ರೆಸ್ ಪರಿವಾರದವರಿಗೆ ಭಯ ಶುರುವಾಗಿದೆ. ರಾಜ್ಯದಲ್ಲಿಯೂ ಬಿಜೆಪಿ 28 ಸ್ಥಾನ ಗೆದ್ದರೆ ಅವರ ಸರ್ಕಾರವೂ ಉಳಿಯುವ ಅನುಮಾನ ಇದೆ. ಅದಕ್ಕೆ ಸಿಎಂ ಅವರು ನೀಡಿರುವ ಹೇಳಿಕೆಯೇ ಸಾಕ್ಷಿ. ಅವರ ಕ್ಷೇತ್ರದಲ್ಲಿ ಹೆಚ್ಚು ಲೀಡ್‌ಕೊಡದಿದ್ದರೆ ತಮ್ಮ ಕುರ್ಚಿ ಉಳಿಯುವುದಿಲ್ಲ ಅಂತ ಅವರೇ ಹೇಳಿದ್ದಾರೆ ಎಂದರು.