ವಿಜಯನಗರ: ನಾವು ಸರ್ಕಾರದ ವಿರುದ್ದ ಅಥವಾ ಪಕ್ಷದ ವಿರುದ್ಧ ಪತ್ರ ಬರೆದಿಲ್ಲ. ಶಾಸಕಾಂಗ ಸಭೆ ಕರೆದರೆ ಎಲ್ಲವೂ ಸರಿ ಹೋಗುತ್ತದೆ. ಹಾಗಾಗಿ ಸಭೆ ಕರೆಯುವಂತೆ ಹೇಳಿದ್ದೇವೆ ಎಂದು ಶಾಸಕ ಬಸವರಾಜ್ ರಾಯರೆಡ್ಡಿ ತಿಳಿಸಿದ್ದಾರೆ.
ವಿಜಯನಗರದಲ್ಲಿ ಮಾತನಾಡಿದ ಶಾಸಕ ರಾಯರೆಡ್ಡಿ, ಸರ್ಕಾರದ ಬಗ್ಗೆ ನಮಗೆ ಯಾವುದೇ ಅಸಮಾಧಾನವಿಲ್ಲ, ನಾವು ಸರ್ಕಾರ ಅಥವಾ ಪಕ್ಷದ ವಿರುದ್ಧ ಪತ್ರ ಬರೆದಿಲ್ಲ. ನಮ್ಮಲ್ಲಿ ಯಾವ ಸಂಘರ್ಷವೂ ಇಲ್ಲ. ಸಂವಹನದ ಕೊರತೆ ಇರಬಹುದು ಅಷ್ಟೇ. ಶಾಸಕಾಂಗ ಸಭೆ ಕರೆದು ಮಾತನಾಡಿದರೆ ಎಲ್ಲವೂ ಸರಿ ಹೋಗುತ್ತದೆ. ನಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ಸಿಗುತ್ತದೆ ಎಂದು ಹೇಳಿದ್ದಾರೆ.
ನಾವಿನ್ನೂ ಕೆಲ ಸಚಿವರನ್ನು ಬೇಟಿಯಾಗಿಲ್ಲ. ಎಲ್ಲರೊಂದಿಗೂ ಮಾತನಾಡಬೇಕು. ಆ ನಿಟ್ಟಿನಲ್ಲಿ ಶಾಸಕಾಂಗ ಸಭೆ ಕರೆಯಬೇಕು. ಬಿ.ಕೆ ಹರಿಪ್ರಸಾದ್ ಹೇಳಿಕೆಗೂ ನಮ್ಮ ಪತ್ರಕ್ಕೂ ಯಾವುದೇ ಸಂಬಂಧವಿಲ್ಲ. ಸಿಎಂ ಸಿದ್ದರಾಮಯ್ಯ ಉತ್ತಮ ಆಡಳಿತ ನಡೆಸುತ್ತಿದ್ದಾರೆ. ಇದಕ್ಕಿಂತ ಉತ್ತಮ ಸರ್ಕಾರ ನಡೆಸಲು ಸಾಧ್ಯವಿಲ್ಲ. ಸಿದ್ದರಾಮಯ್ಯ ದೇಶದಲ್ಲೇ ನಂಬರ್ 1 ಸಿಎಂ ಎಂದು ಹೇಳಿದರು.
ಶಾಸಕಾಂಗ ಸಭೆ ಕರೆಯಬೇಕು ಎಂಬುದು ಶಾಸಕರ ಒತ್ತಾಯ ಇತ್ತು. ಆಳಂದ ಶಾಸಕ ಬಿ.ಆರ್.ಪಾಟೀಲ್ ಸಭೆ ಕರೆದು ಚರ್ಚೆ ಮಾಡಬೇಕು ಎಂದಿದ್ದರು. ಅದರಂತೆ ಅವರು ಪತ್ರ ರೆಡಿ ಮಾಡಿಕೊಂಡು ಬಂದು ಸಹಿ ಮಾಡಿ ಅಂದ್ರು ಅದಕ್ಕೆ ನಾನು ಸಹಿ ಮಾಡಿದ್ದೇನೆ. ಪತ್ರದಲ್ಲಿ ಬೇರೆನೂ ಇಲ್ಲ, ಶಾಸಕಾಂಗ ಸಭೆ ಕರಿಯಬೇಕು. ಅಭಿವೃದ್ಧಿ ವಿಚಾರ ಚರ್ಚೆ ಆಗಬೇಕು. ಹೊಸ ಶಾಸಕರು, ಸಚಿವರ ನಡುವೆ ಸೌಹಾರ್ದಯುತ ಚರ್ಚೆ ನಡೆಯಬೇಕು. ಅದರಲ್ಲಿ ತಪ್ಪೇನೂ ಇಲ್ಲ. ಸುಮಾರು 35 ಶಾಸಕರು ಸಹಿ ಮಾಡಿದ್ದಾರೆ. ಅದಕ್ಕಾಗಿ ಸಿಎಂ ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ ಎಂದು ತಿಳಿಸಿದ್ದಾರೆ.