ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಜಿ 20 ಶೃಂಗಸಭೆಗೂ ಮುನ್ನ ಇಂಡಿಯಾ ಹಾಗೂ ಭಾರತ ಎಂಬ ಹೆಸರಿನ ಬಗ್ಗೆ ದೇಶದಲ್ಲಿ ವಾದ – ವಿವಾದ ಜೋರಾಗಿದೆ. ಈ ಎಲ್ಲದರ ನಡುವೆ ಪ್ರಧಾನಿ ನರೇಂದ್ರ ಮೋದಿ ಎದುರು ಇಡಲಾದ ನೇಮ್ಬೋರ್ಡ್ನಲ್ಲಿಯೂ ಇಂಡಿಯಾದ ಬದಲು ಭಾರತ್ ಎಂದು ಬರೆಯಲಾಗಿರೋದು ಮತ್ತೊಮ್ಮೆ ಸುದ್ದಿಯಲ್ಲಿದೆ.
ಜಿ 20 ಶೃಂಗಸಭೆಯಲ್ಲಿ ವಿಶ್ವ ನಾಯಕರನ್ನು ಆಹ್ವಾನಿಸುವ ಸಂದರ್ಭದಲ್ಲಿಯೂ ರಾಷ್ಟ್ರಪತಿ ದ್ರೌಪದಿ ಮುರ್ಮು ನೀಡಿದ ಆಹ್ವಾನ ಪತ್ರಿಕೆಯಲ್ಲಿಯೂ ಭಾರತ್ ಎಂದು ಬರೆಯಲಾಗಿತ್ತು. ಇದಾದ ಬಳಿಕವೇ ದೇಶದಲ್ಲಿ ರಾಜಕೀಯ ಗದ್ದಲ ಜೋರಾಗಿತ್ತು.
ಈ ತಿಂಗಳಾಂತ್ಯದಲ್ಲಿ ನಡೆಯಲಿರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಭಾರತವನ್ನು ಇಂಡಿಯಾ ಬದಲಾಗಿ ಭಾರತ್ ಎಂದು ಮರುನಾಮಕರಣ ಮಾಡುವ ಬಗ್ಗೆ ಚರ್ಚೆ ನಡೆಯಬಹುದು ಎಂಬ ಊಹಾಪೋಹಗಳ ನಡುವೆಯೇ ಪ್ರಧಾನಿ ಮೋದಿಯ ಈ ನಡೆ ಈ ಮಾತಿಗೆ ಇನ್ನಷ್ಟು ಪುಷ್ಠಿ ನೀಡಿದೆ.
ಜಿ 20 ಪುಸ್ತಕದಲ್ಲಿಯೂ ಭಾರತ್ ಎಂಬ ಹೆಸರನ್ನೇ ಬಳಕೆ ಮಾಡಲಾಗಿದೆ. ಭಾರತ – ಪ್ರಜಾಪ್ರಭುತ್ವದ ತಾಯಿ ಎಂಬ ವಿದೇಶಿ ಪ್ರತಿನಿಧಿಗಳಿಗೆ ನೀಡಲಾದ ಪುಸ್ತಕಗಳಲ್ಲಿ ಬಳಕೆ ಮಾಡಲಾಗಿದೆ. ಭಾರತ ಎಂಬುದು ನಮ್ಮ ದೇಶದ ಅಧಿಕೃತ ಹೆಸರು. ಇದನ್ನು ಸಂವಿಧಾನದಲ್ಲಿಯೇ ಉಲ್ಲೇಖಿಸಲಾಗಿದೆ. 1946-48ರಲ್ಲಿಯೂ ಈ ಬಗ್ಗೆ ಚರ್ಚೆ ನಡೆದಿತ್ತು ಎಂದು ಕಿರುಪುಸ್ತಕದಲ್ಲಿ ಬರೆಯಲಾಗಿದೆ.
ಆದರೆ ಈ ವಿಚಾರವಾಗಿ ದೇಶದಲ್ಲಿ ಈಗಾಗಲೇ ದೊಡ್ಡ ಮಟ್ಟದ ವಿವಾದ ಏರ್ಪಟ್ಟಿದೆ. ಈ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ತೀವ್ರ ವಾಗ್ದಾಳಿ ನಡೆಸುತ್ತಿವೆ. ಮೋದಿ ಸರ್ಕಾರವು ಇತಿಹಾಸವನ್ನು ತಿರುಚಿ ಭಾರತವನ್ನು ವಿಭಜಿಸಿದೆ ಎಂದು ವಿಪಕ್ಷಗಳು ಆರೋಪಿಸುತ್ತಿವೆ.