
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಬಹು ನಿರೀಕ್ಷಿತ ‘ಕಾಟೇರ’ ಸಿನಿಮಾ ಡಿಸೆಂಬರ್ 29ಕ್ಕೆ ಬಿಡುಗಡೆಯಾಗಲಿದ್ದು ಅವರ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಈ ಚಿತ್ರದ ಮೊದಲ ಹಾಡು ಇತ್ತೀಚಿಗಷ್ಟೇ youtube ನಲ್ಲಿ ಧೂಳೆಬ್ಬಿಸಿದ್ದು ಇದೀಗ ‘ಯಾವ ಜನುಮದ ಗೆಳತಿ’ ಎಂಬ ಎರಡನೇ ಹಾಡು ಡಿಸೆಂಬರ್ 11ಕ್ಕೆ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆಗಲಿದೆ. ಈ ಕುರಿತು ಚಿತ್ರ ತಂಡ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.
ತರುಣ್ ಸುಧೀರ್ ಆಕ್ಷನ್ ಕಟ್ ಹೇಳಿರುವ ಈ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಜೋಡಿಯಾಗಿ ಮಾಲಾಶ್ರೀ ಪುತ್ರಿ ಆರಾಧನಾ ನಾಯಕಿಯಾಗಿ ಅಭಿನಯಿಸಿದ್ದು, ಶೃತಿ, ಜಗಪತಿ ಬಾಬು, ಮಾಸ್ಟರ್ ರೋಹಿತ್, ಅವಿನಾಶ್, ಕುಮಾರ್ ಗೋವಿಂದ್ ಸೇರಿದಂತೆ ಹಲವರ ತಾರಾ ಬಳಗವಿದೆ. ರಾಕ್ ಲೈನ್ ವೆಂಕಟೇಶ್ ತಮ್ಮ ರಾಕ್ ಲೈನ್ ಎಂಟರ್ಟೈನ್ಮೆಂಟ್ ಬ್ಯಾನರ್ ನಡಿ ನಿರ್ಮಾಣ ಮಾಡಿದ್ದು, ವಿ ಹರಿಕೃಷ್ಣ ಸಂಗೀತ ಸಂಯೋಜನೆ ನೀಡಿದ್ದಾರೆ.
