ಬೆಂಗಳೂರು: ವಿವಾದಿತ ಹೇಳಿಕೆಗಳ ಕಾರಣದಿಂದ ಉತ್ತರ ಕನ್ನಡ ಸಂಸದ ಅನಂತ್ ಕುಮಾರ್ ಹೆಗಡೆಯವರಿಗೆ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಮರು ಸ್ಪರ್ಧೆಗೆ ಅವಕಾಶ ಸಿಗುವ ಸಾಧ್ಯತೆ ಕ್ಷೀಣಿಸಿದೆ.
ಸಂವಿಧಾನ ತಿದ್ದುಪಡಿ ಸೇರಿದಂತೆ ಹಲವು ಸೂಕ್ಷ್ಮ ವಿಚಾರ ಪ್ರಸ್ತಾಪಿಸಿ ವಿವಾದಕ್ಕೆ ಗುರಿಯಾದ ಅನಂತ್ ಕುಮಾರ್ ಹೆಗಡೆಯವರಿಗೆ ಟಿಕೆಟ್ ಕೈತೋಪುವ ಸಾಧ್ಯತೆ ಇದೆ. ಈ ಬಾರಿ ಅನಂತ್ ಕುಮಾರ್ ಹೆಗಡೆಯವರಿಗೆ ಟಿಕೆಟ್ ನೀಡುವುದಿಲ್ಲ ಎನ್ನುವ ಚರ್ಚೆ ಆರಂಭದಿಂದಲೂ ನಡೆದಿತ್ತು. ಕಳೆದ ಒಂದು ವರ್ಷದಿಂದ ರಾಜಕಾರಣದಿಂದ ಅನಂತ್ ಕುಮಾರ್ ಹೆಗಡೆ ದೂರವಿದ್ದರು. ಚುನಾವಣೆ ಸಮೀಪಿಸುತ್ತಿದ್ದಂತೆ ಸಕ್ರಿಯರಾದ ಅವರು ಜನ ಸಂಪರ್ಕದಲ್ಲಿ ತೊಡಗಿದ್ದಾರೆ.
ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಅನಂತಕುಮಾರ ಹೆಗಡೆ ಬದಲಿಗೆ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ್ ಕೋಣೆಮನೆ, ಚಿಂತಕ ಚಕ್ರವರ್ತಿ ಸೂಲಿಬೆಲೆ ಅವರ ಹೆಸರು ಪ್ರಮುಖವಾಗಿ ಕೇಳಿ ಬಂದಿದ್ದು, ಬಿಜೆಪಿ ಹೈಕಮಾಂಡ್ ಯಾರಿಗೆ ಟಿಕೆಟ್ ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ.