
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಏಷ್ಯಾದ ಅತಿ ದೊಡ್ಡ ಏರ್ ಶೋ ಏರೋ ಇಂಡಿಯಾ-2025ಕ್ಕೆ ಇಂದು ಕೊನೇ ದಿನ. ಲೋಹದ ಹಕ್ಕಿಗಳ ಪ್ರದರ್ಶನ, ಹಾರಾಟವನ್ನು ಕಣ್ತುಂಬಿಕೊಳ್ಳಲು ಯಲಹಂಕ ವಾಯುನೆಲೆಯತ್ತ ಜನಸಾಗರವೇ ಹರಿದು ಬರುತ್ತಿದೆ. ಇದರಿಂದಾಗಿ ಫುಲ್ ಟ್ರಾಫಿಕ್ ಜಾಮ್ ಉಂಟಾಗಿದೆ.
ಯಲಹಂಕ ಸುತ್ತಮುತ್ತಲಿನ ಪ್ರದೇಶದಲ್ಲಿ ಬೆಳಿಗ್ಗೆಯಿಂದಲೇ ಟ್ರಾಫಿಕ್ ಜಾಮ್ ಸಂಭವಿಸಿದೆ. ಏರ್ ಶೋಗೆ ಇಂದು ಕೊನೆ ದಿನವಾದ್ದರಿಂದ ಏರ್ ಶೋ ನೋಡಲೆಂದು ಜನರು ಭಾರಿ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ಸಂಚಾರ ದಟ್ಟಣೆಯುಂಟಾಗಿದೆ.
ಯಲಹಂಕ ಸುತ್ತಮುತ್ತ ನಾಲ್ಕು ಕಿ.ಮೀವರೆಗೂ ಟ್ರಾಫಿಕ್ ಜಾಮ್ ಉಂಟಾಗಿದ್ದು, ವಾಹನ ಸವಾರರು ಪರದಾಟ ನಡೆಸಿದ್ದಾರೆ. ಈ ಮಧ್ಯೆ ಟ್ರಾಫಿಕ್ ನಡುವೆಯೇ ಆಂಬುಲೆನ್ಸ್ ವೊಂದು ಸಿಲುಕಿಕೊಂಡಿರುವ ಘಟನೆಯೂ ನಡೆದಿದೆ.
ಸರ್ವಿಸ್ ರಸ್ತೆಯಲ್ಲಿಯೂ ಸಂಚಾರ ದಟ್ಟಣೆಯುಂಟಾಗಿದ್ದು, ವಾಹನಗಳು ಗಂಟೆಗಟ್ಟೆಲೇ ನಿಂತಲ್ಲೇ ನಿಲ್ಲುವಂತಾಗಿದೆ. ಇನ್ನು ಯಲಹಂಕ ಸುತ್ತಮುತ್ತ ಪ್ರದೇಶದಲ್ಲಿ ಟ್ರಾಫಿಕ್ ಜಾಮ್ ನಿಂದಾಗಿ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವ ಪ್ರಯಾಣಿಕರು ಬದಲಿ ಮಾರ್ಗ ಅನುಸರಿಸುವಂತೆ ಏರ್ ಪೋರ್ಟ್ ಪ್ರಾಧಿಕಾರ ಸೂಚನೆ ನೀಡಿದೆ.