ಬೆಂಗಳೂರು : ಬೆಂಗಳೂರಿನ 15 ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್ ಬೆದರಿಕೆ ಬಂದ ಹಿನ್ನೆಲೆ ಸಿಲಿಕಾನ್ ಸಿಟಿ ಬೆಚ್ಚಿ ಬಿದ್ದಿದೆ.
ಘಟನೆ ಸಂಬಂಧ ಸ್ಪೋಟಕ ಮಾಹಿತಿ ಲಭ್ಯವಾಗಿದ್ದು, ಬಾಂಬ್ ಬೆದರಿಕೆ ಹಾಕಿರುವ ಮೇಲ್ನಲ್ಲಿ ಮುಜಾಹಿದ್ ಹೆಸರನ್ನು ಉಲ್ಲೇಖ ಮಾಡಲಾಗಿದೆ ಎನ್ನಲಾಗಿದೆ.
ಏನಿದೆ ಇಮೇಲ್ ನಲ್ಲಿ..?
ನೀವು ನಮ್ಮ ಧರ್ಮವನ್ನು ಒಪ್ಪಿಕೊಳ್ಳಲೇಬೇಕು, ಇಲ್ಲವಾದಲ್ಲಿ ನಿಮ್ಮ ಮಕ್ಕಳನ್ನು ಕೊಲ್ಲಲಾಗುವುದು, ಇಸ್ಲಾಂ ಅನ್ನು ಒಪ್ಪಿಕೊಳ್ಳಿ, ಇಲ್ಲವಾದಲ್ಲಿ ಸಾಯಲು ಸಿದ್ದರಾಗಿ ಎಂದು ಬೆದರಿಕೆಯೊಡ್ಡಲಾಗಿದೆ. ಗ್ಲೋಬಲ್ ಇಂಟರ್ ನ್ಯಾಷನಲ್ ಸ್ಕೂಲ್, ಗ್ರೀನ್ ಹುಡ್ ಹೈ ಸ್ಕೂಲ್, ಸಿಂಗೇನಾ ಅಗ್ರಹಾರ ಸಮೀಪದ ಎಬಿನೇಜರ್, ದೊಮ್ಮಸಂದ್ರ ಬಳಿಯ ಇನ್ವೆಂಚರ್ ಇಂಟರ್ನ್ಯಾಷನಲ್ ಶಾಲೆಗಳಿಗೆ ಬಾಂಬ್ ಬೆದರಿಕೆ ಹಾಕಲಾಗಿದೆ.
ಬಸವೇಶ್ವರ ನಗರ, ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯ 15 ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್ ಬಂದಿದೆ. ಕಳೆದ ವರ್ಷ ಇದೇ ದಿನ ನಗರದ 30 ಶಾಲೆಗಳಲ್ಲಿ ಬಾಂಬ್ ಇಡಲಾಗಿದೆ ಎಂದು ಇ-ಮೇಲ್ ಮೂಲಕ ಬೆದರಿಕೆ ಹಾಕಲಾಗಿತ್ತು. ಆಗ ಪೊಲೀಸರು, ಬಾಂಬ್ ಪತ್ತೆ ದಳ, ಬಾಂಬ್ ನಿಷ್ಕ್ರಿಯದಳದ ಸಿಬ್ಬಂದಿ ಹುಡುಕಾಟ ನಡೆಸಿದ್ದರು. ಇ-ಮೇಲ್ ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಬೆದರಿಕೆ ಬಂದಿರುವ ಶಾಲೆಗಳಿಗೆ ಧಾವಿಸಿದ್ದಾರೆ. ಎಲ್ಲಾ ಶಾಲೆಗಳಿಗೆ ಬಾಂಬ್ ನಿಷ್ಕ್ರಿಯದಳದ ಸಿಬ್ಬಂದಿ ಕೂಡ ದೌಡಾಯಿಸಿ ಪರಿಶೀಲನೆ ನಡೆಸುತ್ತಿದೆ.