ಬೆಂಗಳೂರು : ಅ. 13 ರಂದು ಮಹಿಷಾ ದಸರಾ ಆಚರಣೆಗೆ ರಾಜ್ಯ ಸರ್ಕಾರ ಅನುಮತಿ ನೀಡಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಅಕ್ಟೋಬರ್ 13 ರಂದು ಚಾಮುಂಡಿ ಬೆಟ್ಟದಲ್ಲಿರುವ ಮಹಿಷನಿಗೆ ಪುಷ್ಪಾರ್ಚನೆ ಮಾಡಲಾಗುತ್ತದೆ ನಂತರ ಮಹಿಷಾ ದಸರಾ ಆಚರಣೆ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ.ಈ ಬಗ್ಗೆ ಮಾತನಾಡಿರುವ ಮಾಜಿ ಮೇಯರ್ ಪುರುಷೋತ್ತಮ್ ಕೆಲವರು ಮಹಿಷಾನ ಇತಿಹಾಸ ಗೊತ್ತಿಲ್ಲದವರು ಮಹಿಷಾ ದಸರಾಗೆ ಆಕ್ಷೇಪ ವ್ಯಕ್ತಪಡಿಸುತ್ತಾರೆ ಎಂದರು.
ಇವರಿಗೆ ಉತ್ತರ ಕೊಡಲು ಮುಂದಿನ ಭಾನುವಾರ ಸೆಪ್ಟಂಬರ್ 10 ರಂದು ರಾಜ್ಯಮಟ್ಟದ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ. ಈ ಬಾರಿ ಮಹಿಷಾ ದಸರಾ ಆಚರಣೆಗೆ ಸರ್ಕಾರದಿಂದ ಅನುಮತಿ ಇದೆ. ಜಿಲ್ಲಾ ಉಸ್ತುವಾರಿ ಸಚಿವರು ಕೂಡ ನಿಮ್ಮ ಧಾರ್ಮಿಕ ಆಚರಣೆಗೆ ಯಾರ ಅನುಮತಿಯ ಅವಶ್ಯಕತೆ ಇಲ್ಲ. ನಿಮ್ಮ ಪಾಡಿಗೆ ನೀವು ಮಾಡಿ ಎಂದು ಹೇಳಿದ್ದಾರೆ ಎಂದರು.
ಧಾರ್ಮಿಕ ಸ್ವಾತಂತ್ರ್ಯ ಸಂವಿಧಾನ ಬದ್ಧವಾದ ಹಕ್ಕು. ಯಾರು ಯಾವ ಆಚರಣೆ ಬೇಕಾದರೂ ಮಾಡಬಹುದು. ಯಾವ ಆಚರಣೆ ಮಾಡಬೇಕು. ಯಾವುದನ್ನು ಮಾಡಬಾರದು ಎಂದು ಸರ್ಕಾರ ನಿರ್ಧರಿಸಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಮಹಿಷ ದಸರಾಕ್ಕೆ ಅವಕಾಶ ನೀಡುವುದಾಗಿ ಪರೋಕ್ಷವಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಸುಳಿವು ನೀಡಿದ್ದರು.
ವಿಶ್ವವಿಖ್ಯಾತ ಮೈಸೂರು ದಸರಾ ಆಚರಣೆಗೆ ರಾಜ್ಯ ಸರ್ಕಾರ ಸಕಲ ಸಿದ್ದತೆ ಕೈಗೊಳ್ಳುತ್ತಿದೆ. ಈ ಬಾರಿಯ ಮೈಸೂರು ದಸರಾ ಮಹೋತ್ಸವವನ್ನು ಅದ್ಧೂರಿಯಾಗಿ ಆಚರಿಸಲು ಸರ್ಕಾರ ಸಿದ್ಧತೆ ನಡೆಸಿದೆ. ಈ ಬಾರಿಯ ದಸರಾ ಉದ್ಘಾಟನೆಯನ್ನು ಸಂಗೀತ ನಿರ್ದೇಶಕ ಹಂಸಲೇಖ ನೆರವೇರಿಸಲಿದ್ದಾರೆ.