ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಧನಂಜಯ ಸರ್ಜಿ ಅವರು ಪತ್ನಿ ನಮಿತಾ ಸರ್ಜಿ ಅವರೊಂದಿಗೆ ತೆರಳಿ ಸೋಮವಾರ ಬೆಳಗ್ಗೆ ಶಿವಮೊಗ್ಗ ವಿನೋಬ ನಗರದ ದೇಶೀಯ ವಿದ್ಯಾಶಾಲಾ ಹೈಸ್ಕೂಲ್ ವಿಭಾಗದ ಮತ ಕೇಂದ್ರದಲ್ಲಿ ಮತ ಚಲಾಯಿಸಿದರು.
ನೈರುತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದಲ್ಲಿ ತಾವು ಮತ್ತು ಮೈತ್ರಿ ಅಭ್ಯರ್ಥಿ ಎಸ್.ಎಲ್. ಭೋಜೇಗೌಡರ ಗೆಲುವು ಖಚಿತ ಎಂದು ಡಾ.ಧನಂಜಯ ಸರ್ಜಿ ವಿಶ್ವಾಸ ವ್ಯಕ್ತಪಡಿಸಿದರು.
ಶಿವಮೊಗ್ಗ ವಿನೋಬ ನಗರದ ದೇಶೀಯ ವಿದ್ಯಾಶಾಲಾ ಹೈಸ್ಕೂಲ್ ವಿಭಾಗದ ಮತಕೇಂದ್ರದಲ್ಲಿ ಇಂದು ಬೆಳಗ್ಗೆ ಮತ ಚಲಾಯಿಸಿ ಅವರು ಮಾತನಾಡಿ, ಎದುರಾಳಿಗಳಿಗೆ ಅಪಪ್ರಚಾರವೇ ಕೊನೆಯ ಅಸ್ತ್ರ ಎಂದು ಗುಂಡು ಪಾರ್ಟಿಯ ಕುರಿತ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಈ ವೇಳೆ ರಾಜ್ಯ ಪ್ರಕೋಷ್ಟಗಳ ಸಂಯೋಜಕ ಎಸ್.ದತ್ತಾತ್ರಿ, ಜೆಡಿಎಸ್ ನಾಯಕ, ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಎಚ್. ಮಾಲತೇಶ್, ಅನಿತಾ ರವಿಶಂಕರ್ ಮತ್ತಿತರರು ಹಾಜರಿದ್ದರು.
ಇದಕ್ಕೂ ಮೊದಲು ಡಾ. ಧನಂಜಯ ಸರ್ಜಿ ಅವರು ತಂದೆ ಸರ್ಜಿ ರುದ್ರಪ್ಪ ಹಾಗೂ ತಾಯಿ ಶ್ರೀಮತಿ ರೇಣುಕಮ್ಮ ಹಾಗೂ ಸಂಘ ಪರಿವಾರ ಪ್ರಮುಖರಾದ ಭಾ.ಮ. ಶ್ರೀಕಂಠಯ್ಯ ಮತ್ತು ವಿಧಾನ ಪರಿಷತ್ ಮಾಜಿ ಸಭಾಪತಿ ಡಿ.ಎಚ್. ಶಂಕರಮೂರ್ತಿ ಅವರುಗಳ ಆಶೀರ್ವಾದ ಪಡೆದರು.