ಚೀನಾದ ಜೆಇಇ (ಭಾರತದ JEE ಯಂತೆಯೇ ಈ ಪರೀಕ್ಷೆ) ಪರೀಕ್ಷೆಯನ್ನು 27 ನೇ ಬಾರಿಗೆ ಬರೆದಿದ್ದ 56 ವರ್ಷದ ಕೋಟ್ಯಾಧೀಶ್ವರ ಮತ್ತೆ ಫೇಲ್ ಆಗಿದ್ದಾನೆ. ಈ ಹಿನ್ನೆಲೆಯಲ್ಲಿ ಕಡೆಗೂ ಇದು ತನ್ನಿಂದ ಆಗುವುದಿಲ್ಲವೆಂಬುದನ್ನು ಮನಗಂಡು ಮತ್ತೆ ಈ ಪ್ರಯತ್ನ ಮಾಡುವುದಿಲ್ಲವೆಂಬ ತೀರ್ಮಾನ ಕೈಗೊಂಡಿದ್ದಾನೆ.
56 ವರ್ಷದ ಕೋಟ್ಯಾಧೀಶ Liang Shi 27 ನೇ ಬಾರಿಯಾದರೂ ತಾನು ಉತ್ತೀರ್ಣನಾಗಿ ಯಾವುದಾದರೂ ಒಂದು ಪ್ರತಿಷ್ಠಿತ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪಡೆಯಬಹುದು ಎಂಬ ನಿರೀಕ್ಷೆ ಹೊಂದಿದ್ದು, ಫಲಿತಾಂಶ ಪ್ರಕಟವಾಗುತ್ತಿದ್ದಂತೆ ತೀವ್ರ ನಿರಾಸೆ ಅನುಭವಿಸಿದ್ದಾನೆ. ಮತ್ತೆ ತಾನು ಫೇಲ್ ಆಗಿರುವುದನ್ನು ಅರಿತ ಬಳಿಕ ಇನ್ನು ಮುಂದೆ ಪರೀಕ್ಷೆ ಬರೆಯುವುದಿಲ್ಲ ಎಂಬ ನಿರ್ಧಾರ ತಳೆದಿದ್ದಾನೆ.
ಈ ಪರೀಕ್ಷೆ ಬರೆಯುವ Liang Shi ಖಯಾಲಿ ಕುರಿತು ಚೀನಾದ ಮಾಧ್ಯಮಗಳು ಪದೇ ಪದೇ ಗೇಲಿ ಮಾಡುತ್ತಿದ್ದವಾದರೂ ಆತ ಇದ್ಯಾವುದಕ್ಕೂ ತಲೆಕೆಡಿಸಿಕೊಂಡಿರಲಿಲ್ಲ. ಜೀವನದಲ್ಲಿ ನಾನು ನನ್ನ ಗುರಿಯನ್ನು ಸಾಧಿಸಿಯೇ ತೀರುತ್ತೇನೆ ಎಂಬ ದೃಢ ವಿಶ್ವಾಸ ಹೊಂದಿದ್ದ ಆತ, ಈ ಬಾರಿಯ ಫಲಿತಾಂಶದಿಂದ ಬೇಸರಗೊಂಡಿದ್ದು, ಇನ್ನೆಂದು ಸಹ ನಾನು ಪರೀಕ್ಷೆ ಬರೆಯುವುದಿಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದಾನೆ.