ಮುಂಬೈ: ಶಿವಸೇನೆಯ(ಏಕನಾಥ್ ಶಿಂಧೆ ಬಣ) ಕನಿಷ್ಠ ಐದರಿಂದ ಆರು ಶಾಸಕರು ಶಿವಸೇನೆ(ಯುಬಿಟಿ) ನಾಯಕರೊಂದಿಗೆ ಸಂಪರ್ಕದಲ್ಲಿದ್ದಾರೆ ಮತ್ತು ಪಕ್ಷಕ್ಕೆ ಮರಳುವ ಇಚ್ಛೆಯನ್ನು ತೋರಿಸಿದ್ದಾರೆ. ಶಿವಸೇನೆ(ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಹಿಂದಿರುಗುವ ಬಗ್ಗೆ ನಿರ್ಧರಿಸುತ್ತಾರೆ ಎಂದು ಮೂಲಗಳು ತಿಳಿಸಿವೆ.
ಮಹಾರಾಷ್ಟ್ರದ ಅಜಿತ್ ಪವಾರ್ ಅವರ ಎನ್‌ಸಿಪಿ ಬಣದ ಸುಮಾರು 10-15 ಶಾಸಕರು ಶರದ್ ಪವಾರ್ ಶಿಬಿರದೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಹೇಳಲಾಗಿದೆ.
ಅಜಿತ್ ಪವಾರ್ ಅವರ ಎನ್‌ಸಿಪಿ ಏಕಾಂಗಿ ಲೋಕಸಭಾ ಸ್ಥಾನವನ್ನು ಗೆಲ್ಲುವಲ್ಲಿ ಯಶಸ್ವಿಯಾದ ನಂತರ ಮಹಾರಾಷ್ಟ್ರ ಅಸೆಂಬ್ಲಿ ಚುನಾವಣೆಗೆ ತಿಂಗಳುಗಳ ಮುಂಚೆಯೇ ಈ ಬೆಳವಣಿಗೆ ಸಂಭವಿಸಿದೆ.
ಯಾವುದೇ ಪಕ್ಷವನ್ನು ಹೆಸರಿಸದೆ ಎನ್‌ಸಿಪಿ(ಶರದ್ಚಂದ್ರ ಪವಾರ್) ರಾಜ್ಯ ಅಧ್ಯಕ್ಷ ಜಯಂತ್ ಪಾಟೀಲ್, ಹಲವಾರು ನಾಯಕರು ತಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಹೇಳಿದರು. ಜೂನ್ 9 ರಂದು ನಮ್ಮ ಸಭೆಯಲ್ಲಿ ನಾವು ಈ ಪ್ರಸ್ತಾಪಗಳ ಬಗ್ಗೆ ಯೋಚಿಸುತ್ತೇವೆ. ಜೂನ್ 10 ರಂದು ನಾವು ನಮ್ಮ ಸಂಸ್ಥಾಪನಾ ದಿನ ಆಚರರಿಸಲಿದ್ದೇ ಎಂದು ಅವರು ಹೇಳಿದರು.
ಕೇವಲ 17 ಸ್ಥಾನಗಳನ್ನು ಗಳಿಸಿದ ಆಡಳಿತಾರೂಢ ಮಹಾಯುತಿ ಮೈತ್ರಿಕೂಟಕ್ಕೆ ಮಹಾರಾಷ್ಟ್ರ ಲೋಕಸಭೆಯ ಫಲಿತಾಂಶಗಳು ವಿನಾಶಕಾರಿಯಾಗಿ ಪರಿಣಮಿಸಿದೆ. ಮತ್ತೊಂದೆಡೆ, ಎರಡು ಪಕ್ಷಗಳ ಒಡಕುಗಳಿಂದ ಕಂಗೆಟ್ಟಿರುವ ಪ್ರತಿಪಕ್ಷ ಮಹಾ ವಿಕಾಸ್ ಅಘಾಡಿ(ಎಂವಿಎ) 30 ಸ್ಥಾನಗಳನ್ನು ಗಳಿಸಿದೆ. ಕಾಂಗ್ರೆಸ್ 13 ಸ್ಥಾನಗಳನ್ನು ಗೆದ್ದುಕೊಂಡಿತು, ಶಿವಸೇನೆ(ಯುಬಿಟಿ) 9 ಮತ್ತು ಎನ್‌ಸಿಪಿ(ಶರದ್ಚಂದ್ರ ಪವಾರ್) 8 ಸ್ಥಾನಗಳನ್ನು ಗಳಿಸಿತು.
ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಸಾಧನೆಯ ಹೊಣೆ ಹೊತ್ತು ಬುಧವಾರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ರಾಜೀನಾಮೆ ನೀಡಲು ಮುಂದಾಗಿದ್ದರು. ಆದರೆ, ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ ಮತ್ತು ಫಡ್ನವೀಸ್ ಉಪ ಮುಖ್ಯಮಂತ್ರಿಯಾಗಿ ಮುಂದುವರಿಯುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.