ನವದೆಹಲಿ: ದೆಹಲಿಯ ಐಎಎಸ್ ಕೋಚಿಂಗ್ ಸೆಂಟರ್ ಗೆ ನೀರು ನುಗ್ಗಿ ಮೂವರು ನಾಗರಿಕ ಸೇವಾ ಆಕಾಂಕ್ಷಿಗಳು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಮೃತಪಟ್ಟವರಲ್ಲಿ ಇಬ್ಬರು ಮಹಿಳೆಯರು, ಒಬ್ಬರು ಪುರುಷ ವಿದ್ಯಾರ್ಥಿ ಸೇರಿದ್ದಾರೆ. ಪ್ರಾಥಮಿಕ ವರದಿಗಳ ಪ್ರಕಾರ, ರಾವ್ ಐಎಎಸ್ ಕೋಚಿಂಗ್ ಇನ್‌ಸ್ಟಿಟ್ಯೂಟ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ಘಟನೆಯ ನಂತರ ನಾಪತ್ತೆಯಾಗಿದ್ದಾನೆ. ಬಳಿಕ ವಿದ್ಯಾರ್ಥಿನಿ ಶವ ಪತ್ತೆಯಾಗಿದೆ.
ದೆಹಲಿ ಅಗ್ನಿಶಾಮಕ ಸೇವೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(ಎನ್‌ಡಿಆರ್‌ಎಫ್) ಮತ್ತು ದೆಹಲಿ ಪೊಲೀಸರು ಸ್ಥಳದಲ್ಲೇ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ರಾಷ್ಟ್ರ ರಾಜಧಾನಿಯಲ್ಲಿ ಕೋಚಿಂಗ್ ಇನ್‌ಸ್ಟಿಟ್ಯೂಟ್‌ನ ಬೇಸ್‌ಮೆಂಟ್ ನೀರಿನಿಂದ ತುಂಬಿದೆ. ಎನ್‌ಡಿಆರ್‌ಎಫ್ ತಂಡಗಳು ಸ್ಥಳದಲ್ಲಿವೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಏತನ್ಮಧ್ಯೆ, ದೆಹಲಿಯ ಓಲ್ಡ್ ರಾಜಿಂದರ್ ನಗರ ಪ್ರದೇಶದಲ್ಲಿ ಭಾರೀ ಮಳೆಯ ನಂತರ ಕೋಚಿಂಗ್ ಸೆಂಟರ್ ಅನ್ನು ಹೊಂದಿರುವ ಕಟ್ಟಡದ ನೆಲಮಾಳಿಗೆಯು ಜಲಾವೃತಗೊಂಡ ನಂತರ ನಾಗರಿಕ ಸೇವಾ ಆಕಾಂಕ್ಷಿಗಳ ಸಾವಿನ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.
ನಾಪತ್ತೆಯಾಗಿರುವ ವಿದ್ಯಾರ್ಥಿಗಳ ಪತ್ತೆಗಾಗಿ ಕೋಚಿಂಗ್ ಸೆಂಟರ್‌ನ ನೆಲಮಾಳಿಗೆಯನ್ನು ಅಧಿಕಾರಿಗಳು ತೀವ್ರವಾಗಿ ಶೋಧಿಸುತ್ತಿದ್ದಾರೆ.
ದೆಹಲಿಯ ಬಿಜೆಪಿ ಸಂಸದ ಬಾನ್ಸುರಿ ಸ್ವರಾಜ್ ಮತ್ತು ಎಂಸಿಡಿ ಮೇಯರ್ ಶೆಲ್ಲಿ ಒಬೆರಾಯ್ ಸ್ಥಳಕ್ಕೆ ತೆರಳಿ ರಕ್ಷಣಾ ಕಾರ್ಯಾಚರಣೆಯನ್ನು ಪರಿಶೀಲಿಸಿದ್ದಾರೆ.