ಇತ್ತೀಚಿನ ದಿನಗಳಲ್ಲಿ ಮೊಬೈಲ್ ಇಲ್ಲದೆ ಬದುಕುವುದೇ ಅಸಾಧ್ಯವೆಂಬ ಸ್ಥಿತಿಯಿದೆ. ಹಾಗಾಗಿ ಫೋನ್ ಕರೆಗಳಂತೂ ಸರ್ವೇ ಸಾಮಾನ್ಯ ಸಂಗತಿ. ಬಹುತೇಕ ಎಲ್ಲರ ಬಳಿಯೂ ಈಗ ಸ್ಮಾರ್ಟ್‌ಫೋನ್‌ಗಳಿವೆ. ಮಾರುಕಟ್ಟೆಯಲ್ಲಂತೂ ಸಾಕಷ್ಟು ಬಗೆಯ ಮೊಬೈಲ್‌ಗಳು ಲಭ್ಯವಿವೆ. ಆದರೆ ಭಾರತದಲ್ಲಿ ಮೊದಲ ಫೋನ್ ಕರೆ ಮಾಡಿದವರು ಯಾರು ಮತ್ತು ಯಾರಿಗೆ ಎಂಬುದು ಅನೇಕರಿಗೆ ತಿಳಿದಿಲ್ಲ.
29 ವರ್ಷಗಳ ಹಿಂದೆ ಜುಲೈ 31ರಂದು ದೇಶದಲ್ಲಿ ಮೊದಲ ಫೋನ್ ಕರೆ ಮಾಡಲಾಗಿತ್ತು. ಜುಲೈ 31, 1995 ರಂದು ಪಶ್ಚಿಮ ಬಂಗಾಳದ ಅಂದಿನ ಮುಖ್ಯಮಂತ್ರಿ ಜ್ಯೋತಿ ಬಸು ಅವರು ಮೊದಲ ಫೋನ್ ಕರೆ ಮಾಡಿದರು. ಅವರು ಮೊದಲು ಕರೆಮಾಡಿದ್ದು ಕೇಂದ್ರ ಸಂಪರ್ಕ ಸಚಿವ ಸುಖ್ ರಾಮ್ ಅವರಿಗೆ. ದೇಶದ ಮೊದಲ ನೋಕಿಯಾ ಫೋನ್ ಮೂಲಕ ಜ್ಯೋತಿ ಬಸು ಸಂಭಾಷಿಸಿದ್ದರು. ಹಾಗಾಗಿ ಜುಲೈ 31 ಬಹಳ ಪ್ರಮುಖವಾದ ದಿನ.
ಜ್ಯೋತಿ ಬಸು ಅವರು ಮೋದಿ ಟೆಲ್ಸ್ಟ್ರಾ ಅವರ ನೆಟ್ವರ್ಕ್ ಅಂದರೆ ಸಿಮ್ ಕಾರ್ಡ್ ಮೂಲಕ ಮೊದಲ ಮೊಬೈಲ್ ಕರೆಯನ್ನು ಮಾಡಿದ್ದರು. ಇದು ಎರಡು ಕಂಪನಿಗಳ ಜಂಟಿ ಉದ್ಯಮವಾಗಿತ್ತು. ಮೊದಲನೆಯದು ಬಿಕೆ ಮೋದಿ, ಅದು ಭಾರತೀಯ ಕಂಪನಿ. ಎರಡನೆಯದು ಆಸ್ಟ್ರೇಲಿಯಾದ ಕಂಪನಿಯಾದ ಟೆಲ್ಸ್ಟ್ರಾ.
ಈ ಫೋನ್ ಕರೆಯನ್ನು ಕಲ್ಕತ್ತಾ ಮತ್ತು ದೆಹಲಿ ನಡುವೆ ಮಾಡಲಾಗಿದೆ. ಆಗ ಕರೆಗಳ ದರ ಕೂಡ ತುಂಬಾ ಹೆಚ್ಚಿತ್ತು. ವರದಿಗಳ ಪ್ರಕಾರ ಆ ಸಮಯದಲ್ಲಿ ಫೋನ್ ಕರೆಗಳ ಬೆಲೆ ನಿಮಿಷಕ್ಕೆ 8.4 ರೂಪಾಯಿ. ಆದ್ರೀಗ ಬಹುತೇಕ ಎಲ್ಲಾ ನೆಟ್ವರ್ಕ್‌ಗಳಲ್ಲೂ ಅನ್‌ಲಿಮಿಟೆಡ್ ಕರೆಗಳ ಸೌಲಭ್ಯವಿದೆ. ಆಗ ಇನ್‌ಕಮಿಂಗ್ ಕಾಲ್‌ಗಳಿಗೂ ಹಣ ಪಾವತಿಸಬೇಕಾಗುತ್ತಿತ್ತು.