ಮಹಾರಾಷ್ಟ್ರದ ನಾಂದೇಡ್‌ನ ಸರ್ಕಾರಿ ಆಸ್ಪತ್ರೆಯಲ್ಲಿ 24 ಗಂಟೆಗಳಲ್ಲಿ 12 ನವಜಾತ ಶಿಶುಗಳು ಸೇರಿದಂತೆ 24 ರೋಗಿಗಳು ಸಾವನ್ನಪ್ಪಿದ್ದಾರೆ.
ಆಘಾತಕಾರಿ ಘಟನೆಯಲ್ಲಿ ಔಷಧಿಗಳ ಕೊರತೆಯಿಂದ ನಾಂದೇಡ್ ನ ಶಂಕರನ್ ಚವಾಣ್ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಕಳೆದ 24 ಗಂಟೆಗಳಲ್ಲಿ ಕನಿಷ್ಠ 24 ತೀವ್ರ ಅಸ್ವಸ್ಥ ರೋಗಿಗಳು ಸಾವನ್ನಪ್ಪಿದ್ದಾರೆ.
ಮೃತರಲ್ಲಿ 12 ನವಜಾತ ಶಿಶುಗಳು ಇವೆ ಎಂದು ಮೂಲಗಳು ಸೋಮವಾರ ತಿಳಿಸಿವೆ. ರಾಜ್ಯಾದ್ಯಂತ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿ ಕೊರತೆ ಇದೆ. ಇದರಿಂದ ರೋಗಿಗಳಿಗೆ ಸಕಾಲಕ್ಕೆ ಔಷಧಿ ದೊರೆಯದೆ ತೀವ್ರ ಅಸ್ವಸ್ಥರಾದ ರೋಗಿಗಳು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿದೆ.
ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಿಗೆ ಔಷಧಿಗಳನ್ನು ಪೂರೈಸುವ ಹಾಫ್ಕಿನ್ ಸಂಸ್ಥೆ ಔಷಧಿಗಳ ಖರೀದಿ ನಿಲ್ಲಿಸಿದೆ. ಇದರಿಂದಾಗಿ ರಾಜ್ಯಾದ್ಯಂತ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಗಳ ಕೊರತೆ ಎದುರಾಗಿದೆ.
ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ(ಎನ್‌ಸಿಪಿ) ವಕ್ತಾರ ವಿಕಾಸ್ ಲವನಾಡೆ ಘಟನೆಯು ಸರ್ಕಾರಕ್ಕೆ ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಟೀಕಿಸಿದ್ದಾರೆ.
ಎನ್‌ಸಿಪಿ ಸಂಸದೆ ಸುಪ್ರಿಯಾ ಸುಳೆ ಸಾವಿಗೆ “ಟ್ರಿಪಲ್ ಎಂಜಿನ್ ಸರ್ಕಾರ್” ಕಾರಣ ಎಂದು ಆರೋಪಿಸಿದ್ದಾರೆ.