ನವದೆಹಲಿ: ಹಿಮಾಚಲ ಪ್ರದೇಶ ಸೇರಿದಂತೆ ಉತ್ತರ ಪ್ರದೇಶದ ಅನೇಕ ರಾಜ್ಯಗಳಲ್ಲಿ ಭಾರಿ ಮಳೆ ಮತ್ತು ಪ್ರವಾಹ ಪರಿಸ್ಥಿತಿ ಉಂಟಾಗಿದೆ.
ಕರ್ನಾಟಕ ಸೇರಿದಂತೆ 22 ರಾಜ್ಯಗಳಿಗೆ ಕೇಂದ್ರ ಸರ್ಕಾರದಿಂದ ರಾಜ್ಯ ವಿಪತ್ತು ಸ್ಪಂದನಾ ನಿಧಿ ಅಡಿಯಲ್ಲಿ 7532 ಕೋಟಿ ರೂಪಾಯಿ ಬಿಡುಗಡೆ ಮಾಡಲು ಅನುಮೋದನೆ ನೀಡಲಾಗಿದೆ.
ಕರ್ನಾಟಕಕ್ಕೆ 348 ಕೋಟಿ ರೂ., ಮಹಾರಾಷ್ಟ್ರಕ್ಕೆ 1,420 ರೂ. ನೀಡಲಾಗಿದೆ. ಉತ್ತರ ಪ್ರದೇಶಕ್ಕೆ 812 ರೂ., ಒಡಿಶಾಗೆ 707 ಕೋಟಿ ರೂ., ಬಿಹಾರಕ್ಕೆ 624 ಕೋಟಿ ರೂ. ನೀಡಲಾಗಿದೆ. ಕೇಂದ್ರ ಹಣಕಾಸು ಸಚಿವಾಲಯ ಈ ಕುರಿತು ಮಾಹಿತಿ ನೀಡಿದ್ದು, ಅನೇಕ ರಾಜ್ಯಗಳಲ್ಲಿ ಅತಿವೃಷ್ಟಿ ಹಿನ್ನೆಲೆಯಲ್ಲಿ ಕಳೆದ ವರ್ಷದ ಹಣಕಾಸು ವರ್ಷದಲ್ಲಿ ಬಿಡುಗಡೆಯಾದ ಹಣ ಬಳಕೆಯ ಪ್ರಮಾಣ ಪತ್ರಕ್ಕೆ ಕಾಯದೆ ಮಾರ್ಗಸೂಚಿಗೆ ವಿನಾಯಿತಿ ನೀಡಿ ಕೂಡಲೇ ಹಣ ಬಿಡುಗಡೆ ಮಾಡಲಾಗಿದೆ ಎಂದು ಹೇಳಲಾಗಿದೆ.
ವಿಪತ್ತು ನಿರ್ವಹಣಾ ಕಾಯ್ದೆಯ ಅಡಿಯಲ್ಲಿ ಪ್ರತಿ ರಾಜ್ಯದಲ್ಲಿ ರಾಜ್ಯ ವಿಕೋಪ ಸ್ಪಂದನಾ ನಿಧಿ ಸ್ಥಾಪಿಸಲಾಗಿದ್ದು, ವಿಪತ್ತು ಉಂಟಾದ ಸಂದರ್ಭದಲ್ಲಿ ರಾಜ್ಯ ಸರ್ಕಾರಗಳು ಈ ಹಣ ಬಳಕೆ ಮಾಡಿಕೊಳ್ಳಬಹುದು. ಈಶಾನ್ಯ ಮತ್ತು ಹಿಮಾಲಯದ ತಪ್ಪಲಿನ ರಾಜ್ಯಗಳ ಎಸ್.ಡಿ.ಆರ್.ಎಫ್. ನಿಧಿಗೆ ಶೇಕಡ 90ರಷ್ಟು, ಉಳಿದ ರಾಜ್ಯಗಳಿಗೆ ಶೇಕಡ 75 ರಷ್ಟು ನಿಧಿಯನ್ನು ಕೇಂದ್ರ ಸರ್ಕಾರ ನೀಡಲಿದೆ.