22 ದಿನಗಳ ಕಂದಮ್ಮನಿಗೆ ಅನಾರೋಗ್ಯ ಎಂಬ ಕಾರಣಕ್ಕೆ ತಂದೆ-ತಾಯಿಗಳೇ ಮೂಢನಂಬಿಕೆ ಮೊರೆ ಹೋಗಿದ್ದು, 65 ಕಡೆ ಬರೆ ಎಳೆದಿರುವ ಅಮಾನವೀಯ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಮಗುವಿಗೆ ಕಬ್ಬಿಣದ ಕಡ್ಡಿ ಕಾಯಿಸಿ ಬರೆ ಎಳೆದಿದ್ದಾರೆ. ಸುಟ್ಟ ಗಾಯಗಳಿಂದ ಮಗುವಿನ ಸ್ಥಿತಿ ಗಂಭೀರವಾಗಿದೆ. ಅನಾರೋಗ್ಯದಿಂದ ಬಳಲುತ್ತಿರುವ ಮಗು 65 ಕಡೆ ಬರೆ ಹಾಕಿದ ಬಳಿಕ ಇನ್ನಷ್ಟು ಅನಾರೋಗ್ಯಕ್ಕೀಡಾಗಿದೆ. ಮಗುವನ್ನು ಡಫರೀಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಫುಲ್ವಂತಿ ರಾಜು ಎಂಬ 22 ದಿನಗಳ ಶಿಶುವಿಗೆ ಸಂಬಂಧಿಕರ ಮಾತು ಕೆಳಿ ಪೋಷಕರು ಬರೆ ಎಳೆದಿದ್ದಾರೆ. ಮಗುವಿನ ಹೊಟ್ಟೆ ಮೇಲೆ 65 ಬರೆ ಬಿದ್ದಿದೆ. ಸ್ವತಃ ಮಗುವಿನ ತಂದೆ ರಾಜು ಅಧಿಕಾರ್ ಹಾಗೂ ತಾಯಿ ಮೂಢನಂಬಿಕೆಯಿಂದ ಈ ಕೃತ್ಯವೆಸಗಿದ್ದು, ಮಗು ಸಾವು-ಬದುಕಿನ ನಡುವೆ ಹೋರಾಡುತ್ತಿದೆ.
ಅಮರಾವತಿ ಜಿಲ್ಲಾ ಮಹಿಳಾ ಆಸ್ಪತ್ರೆಯ ವೈದ್ಯರು ಮಗು ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದೆ. ಹೊಟ್ಟೆಯ ಮೇಲೆ ಗಂಭೀರ ಗಾಯಗಳಾಗಿವೆ. ಮಗುವಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದು, ನಾಗ್ಪುರ ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ.