ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ನಿದ್ರೆ ಅತ್ಯಗತ್ಯ. ದಿನನಿತ್ಯದ ನಿದ್ರೆಯಲ್ಲಿ ಕೊಂಚ ಏರುಪೇರಾಯ್ತೋ, ಇಡೀ ದಿನ ಕಿರಿಕಿರಿ ತಪ್ಪಿದ್ದಲ್ಲ. ಆದರೆ ಅಲ್ಲೊಬ್ಬ 17 ವರ್ಷದ ಯುವಕ ಶಾಲೆಯ ಪ್ರಾಜೆಕ್ಟ್ಗಾಗಿ 11 ದಿನ ನಿದ್ದೆಯೇ ಮಾಡಿರ್ಲಿಲ್ಲ. ಅದರ ಪರಿಣಾಮ 12 ನೇ ದಿನ ಅನುಭವಿಸಬಾರದ ಕಷ್ಟ ಅನುಭವಿಸಿದ್ದ.
ಇದು 1963ರ ಡಿಸೆಂಬರ್ ತಿಂಗಳು ಅಂದರೆ, 63 ವರ್ಷದ ಹಿಂದಿನ ಮಾತು. ಅಂದು ರೆಂಡಿ ಗಾರ್ಡನರ್ ಹಾಗೂ ಬ್ರುಸ್ ಮ್ಯಾಕ್ಲಿಸ್ಟರ್ ಇವರಿಬ್ಬರಿಗೂ ಶಾಲೆಯಲ್ಲಿ ನಿದ್ದೆಗೆ ಸಂಬಂಧಿಸಿದ ಪ್ರಾಜೆಕ್ಟ್ ನೀಡಲಾಗಿತ್ತು. ಆ ಪ್ರಾಜೆಕ್ಟ್ಗಾಗಿ ಇವರಿಬ್ಬರು ಓರ್ವ ವ್ಯಕ್ತಿ ನಿದ್ದೆ ಇಲ್ಲದೇ ಎಷ್ಟು ದಿನ ಇರಬಲ್ಲ ಅನ್ನೊ ಪ್ರಯೋಗ ಮಾಡಲು ಮುಂದಾದರು. ಈ ವಿಷಯಕ್ಕೆ ಕುರಿತಂತೆ ಅವರು ಕೆಲ ರಿಸರ್ಚ್ ಮಾಡಿದಾಗ, ಹೊನಲುಲು ಮೂಲದ ವ್ಯಕ್ತಿ 10 ದಿನಗಳ ತನಕ ಮಲಗದೇ ದಾಖಲೆ ಮಾಡಿರುವ ವಿಚಾರ ಗೊತ್ತಾಗುತ್ತೆ. ಆದ್ದರಿಂದ ಇವರಿಬ್ಬರು ಈ ದಾಖಲೆಯನ್ನ ಮುರಿಯುವ ನಿರ್ಧಾರಕ್ಕೆ ಬರುತ್ತಾರೆ.
ಇದೇ ಕಾರಣಕ್ಕೆ ಇವರಿಬ್ಬರು ಒಬ್ಬರಿಗೊಬ್ಬರು ಯಾವುದೇ ಔಷಧಿ-ಆಹಾರ ಸೇವನೆ ಮಾಡದೇ ಕಡಿಮೆ ಅಂದರೂ 11 ದಿನ ಎಚ್ಚರವಾಗಿಯೇ ಇರಬೇಕು ಅನ್ನೋ ನಿರ್ಧಾರಕ್ಕೆ ಬರುತ್ತಾರೆ. ಇಬ್ಬರ ನಡುವೆ ಟಾಸ್ ಆದಾಗ ಬ್ರುಸ್ ಟಾಸ್ ಗೆಲ್ಲುತ್ತಾನೆ. ಮೂರು ದಿನಗಳ ಕಾಲ ನಿದ್ದೆ ಇಲ್ಲದೇ ಇಬ್ಬರೂ ಎಚ್ಚರವಾಗಿರುತ್ತಾರೆ.
ಆದರೆ ನೋಟ್ಸ್ ಬರೀತಾ ಇರುವಾಗಲೇ ಬ್ರೂಸ್ ಮಧ್ಯದಲ್ಲಿ ನಿದ್ದೆ ಮಾಡಿಬಿಡುತ್ತಾನೆ. ಆದ್ದರಿಂದ ಈ ನಿದ್ರೆ ಇಲ್ಲದ ಪ್ರಯೋಗ ರೆಂಡಿ ಮುಂದುವರೆಸಿಕೊಂಡು ಹೋಗುತ್ತಾನೆ. ಆ ಸಮಯದಲ್ಲಿ ವೈದ್ಯ ಜಾನ್ರೋಸ್ ಇವರ ಆರೋಗ್ಯದ ಮೇಲೆ ನಿಗಾ ಇಡಲು ಮುಂದೆ ಬರುತ್ತಾರೆ. ಹಾಗೆಯೇ ಇಬ್ಬರು ನಿರ್ಣಾಯಕರಾಗಿ ಅಲ್ಲೇ ಇರುತ್ತಾರೆ.
10 ದಿನಗಳನ್ನ ರೆಂಡಿ ನಿದ್ರೆಯೇ ಇಲ್ಲದೇ ಕಳೆದುಬಿಡುತ್ತಾನೆ. ಆದರೆ 11ನೇ ದಿನ ಹೆಲುಸಿನೆಷನ್(ಮಾನಸಿಕ ಸಮಸ್ಯೆ) ಕಾಣಿಸುತ್ತೆ. ಆಗ ಆತನಿಂದ ನೋಟ್ಸ್ ಬರೆಯುವುದಕ್ಕೂ ಸಾಧ್ಯವಾಗಿರಲಿಲ್ಲ. ಆದರೆ ಅಷ್ಟೊತ್ತಿಗೆ ಹಿಂದಿನ ದಾಖಲೆಯನ್ನ ಬ್ರೇಕ್ ಮಾಡಿದ್ದಾಗಿತ್ತು.
ಈ ಪ್ರಯೋಗದ ನಂತರ ರೆಂಡಿ 14 ಗಂಟೆಗಳ ಕಾಲ ದೀರ್ಘಾವಧಿ ನಿದ್ದೆ ಮಾಡಿದ್ದ. ಆ ಸಮಯದಲ್ಲಿ ಆತನಿಗೆ ಏನೂ ಸಮಸ್ಯೆ ಕಾಣಿಸಿರಲಿಲ್ಲ. ಆದರೆ 2000 ವರ್ಷದಲ್ಲಿ ನಿದ್ರಾಹೀನತೆ ಸಮಸ್ಯೆ ಕಾಣಿಸತೊಡಗಿತು. ಆಗಲೇ ಆತನಿಗೂ ಗೊತ್ತಾಗಿದ್ದು ಇದು 63 ವರ್ಷದ ಹಿಂದೆ ಮಾಡಿದ್ದ ಪ್ರಯೋಗದ ಎಫೆಕ್ಟ್ ಎಂದು.