ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ನೌಕರರು ಇಂದಿನಿಂದ ಮುಷ್ಕರ ಆರಂಭಿಸಿದ್ದು ಇದರ ಮಧ್ಯೆ, ಮಧ್ಯಂತರ ಆದೇಶ ಹೊರಡಿಸಿರುವ ರಾಜ್ಯ ಸರ್ಕಾರ ಶೇಕಡ 17ರಷ್ಟು ವೇತನ ಹೆಚ್ಚಿಸಿದೆ.
2023ರ ಏಪ್ರಿಲ್ 1ರಿಂದ ಇದು ಜಾರಿಗೆ ಬರಲಿದ್ದು, ಇದರ ಮಧ್ಯೆ ರಾಜ್ಯ ಸರ್ಕಾರಿ ನೌಕರರ ಸಂಘ ಮುಷ್ಕರದ ಕುರಿತಂತೆ ಯಾವ ತೀರ್ಮಾನ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಸರ್ಕಾರಿ ನೌಕರರ ಭವನದಲ್ಲಿ ಪದಾಧಿಕಾರಿಗಳು ಸಭೆ ನಡೆಸಲಿದ್ದು, ಆ ಬಳಿಕ ಮುಷ್ಕರ ಮುಂದುವರಿಸಬೇಕೋ ಬೇಡವೋ ಎಂಬುದನ್ನು ತೀರ್ಮಾನಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಇದರ ಮಧ್ಯೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿರುವ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ, ನಮ್ಮ ಬೇಡಿಕೆಗೆ ಸರ್ಕಾರದ ಕಡೆಯಿಂದ ಸೂಕ್ತ ಸ್ಪಂದನೆ ವ್ಯಕ್ತವಾಗುತ್ತಿದೆ ಎಂದು ಹೇಳಿರುವ ಹಿನ್ನೆಲೆಯಲ್ಲಿ ಬಹುತೇಕ ಮುಷ್ಕರ ಇಂದೇ ಅಂತ್ಯಗೊಳ್ಳಬಹುದು ಎಂದು ಹೇಳಲಾಗುತ್ತಿದೆ.