ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಹೊತ್ತಿರುವ ಕುಸ್ತಿ ಒಕ್ಕೂಟದ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕುಸ್ತಿಪಟುಗಳು ನಡೆಸುತ್ತಿದ್ದ ಹೋರಾಟದಲ್ಲಿ ಈಗ ಬಿರುಕು ಮೂಡಿದೆ. ಈ ಹೋರಾಟದ ನೇತೃತ್ವ ವಹಿಸಿರುವ ಸಾಕ್ಷಿ ಮಲಿಕ್ ಹಾಗೂ ಅವರ ಪತಿ ಸತ್ಯವ್ರತ್ ಕಡಿಯಾನ್ ವಿರುದ್ಧ ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದರು ಎನ್ನಲಾದ ಅಪ್ರಾಪ್ತೆಯ ತಂದೆ ತಿರುಗಿಬಿದ್ದಿದ್ದಾರೆ.
ಬ್ರಿಜ್ ಭೂಷಣ್ ವಿರುದ್ಧದ ಲೈಂಗಿಕ ದೌರ್ಜನ್ಯದ ಪೋಕ್ಸೋ ಕಾಯ್ದೆ ಅಡಿ ದಾಖಲಾಗಿದ್ದ ದೂರನ್ನು ಹಿಂಪಡೆದಿದ್ದ ಅಪ್ರಾಪ್ತ ಕುಸ್ತಿಪಟುವಿನ ಕುಟುಂಬಕ್ಕೆ ಜೀವ ಬೆದರಿಕೆ ಹಾಕಲಿದೆ. ಆ ಕುಟುಂಬ ಮಾನಸಿಕ ಖಿನ್ನತೆಗೆ ಒಳಗಾಗಿದೆ ಎಂಬ ಸಾಕ್ಷಿ ಮಲಿಕ್ ಆರೋಪಕ್ಕೆ ಪ್ರತಿಕ್ರಿಯಿಸಿರುವ ಅಪ್ರಾಪ್ತೆಯ ತಂದೆ, ನಮ್ಮನ್ನು ಯಾರೂ ಬೆದರಿಸಿಲ್ಲ. ದಾಖಲಾಗಿರುವುದು ಸುಳ್ಳು ದೂರು ಎಂಬುದು ನಮ್ಮ ಅರಿವಿಗೆ ಬರುತ್ತಿದ್ದಂತೆ ಅದನ್ನು ಹಿಂಪಡೆದಿರುವುದಾಗಿ ಹೇಳಿದ್ದಾರೆ.
ಇದರ ಮಧ್ಯೆ ಸಾಕ್ಷಿ ಮಲಿಕ್ ಹಾಗೂ ಅವರ ಪತಿ ವಿರುದ್ಧ ಮತ್ತೊಂದು ಗುರುತರ ಆರೋಪ ಮಾಡಿರುವ ಬಿಜೆಪಿ ನಾಯಕಿ ಬಬಿತಾ ಪೋಗಟ್, ಅವರಿಬ್ಬರೂ ಕಾಂಗ್ರೆಸ್ ಪಕ್ಷದ ಕೀಲಿ ಗೊಂಬೆಗಳು. ಸಮಸ್ಯೆಗೆ ಪರಿಹಾರ ದೊರಕಿಸಲಾಗುತ್ತದೆ ಎಂದು ಹಿರಿಯ ಆಟಗಾರರು ಹಲವು ಬಾರಿ ಹೇಳಿದರೂ ಸಹ ನಮ್ಮಗಳ ಮಾತು ಕೇಳದೆ ಕಾಂಗ್ರೆಸ್ ನಾಯಕರನ್ನು ಭೇಟಿಯಾಗುವ ಮೂಲಕ ತಮ್ಮದು ರಾಜಕೀಯ ಪ್ರೇರಿತ ಹೋರಾಟ ಎಂಬುದನ್ನು ಸಾಬೀತುಪಡಿಸಿದ್ದಾರೆ ಎಂದು ಆರೋಪಿಸಿದ್ದಾರೆ.