ಹೊಸ ವರ್ಷವೆಂದೇ ಕರೆಯಲಾಗುವ ಯುಗಾದಿಯನ್ನು ಗ್ರಾಮಾಂತರ ಪ್ರದೇಶದಲ್ಲಿ ವಿಶೇಷವಾಗಿ ಆಚರಿಸುತ್ತಾರೆ. ಸಾಮಾನ್ಯವಾಗಿ ಹಳ್ಳಿಗಳಲ್ಲಿ ಎಲ್ಲಾ ಹಬ್ಬದ ಆಚರಣೆ ವಿಶೇಷವಾಗಿರುತ್ತವೆ. ರೈತರಿಗೆ ಬೇಸಿಗೆ ಎಂದರೆ ಬಿಡುವಿನ ದಿನ. ಇನ್ನು, ಊರಿನಿಂದ ಹೊರಗೆ ಹೋದವರೆಲ್ಲಾ ಹಬ್ಬಕ್ಕೆ ಊರಿಗೆ ಬರುತ್ತಾರೆ. ಮನೆ ಮಂದಿಯೆಲ್ಲ ಸೇರಿ ಹಬ್ಬವನ್ನು ಆಚರಿಸುತ್ತಾರೆ. ಸ್ನೇಹಿತರೆಲ್ಲಾ ಸೇರಿ ಸಂಭ್ರಮಿಸುತ್ತಾರೆ.
ಎಣ್ಣೆ ಸ್ನಾನ, ಬೇವು ಬೆಲ್ಲ ಹಂಚುವುದು, ಹೊಸಬಟ್ಟೆ, ಚಂದ್ರನ ದರ್ಶನ, ಯುಗಾದಿಯ ಮರುದಿನ ವರ್ಷದ ತೊಡಕು ಇನ್ನೂ ಅನೇಕ ಆಚರಣೆಗಳು ಪ್ರಚಲಿತದಲ್ಲಿವೆ. ಕೆಲವು ಕಡೆಗಳಲ್ಲಿ ಯುಗಾದಿಯ ವೇಳೆ ಜೂಜಾಟ ಜೋರಾಗಿ ನಡೆಯುತ್ತದೆ.
ಯುಗಾದಿಯ ವೇಳೆ ಮರಗಿಡಗಳೆಲ್ಲಾ ಹಸಿರು ತುಂಬಿಕೊಂಡು ನಳನಳಿಸುತ್ತವೆ. ಯುಗಾದಿ ದಿನ ಮಾಡಿದ ಕೆಲಸಗಳು ಒಳಿತಾಗುತ್ತವೆ ಎಂಬ ನಂಬಿಕೆ ಇದೆ. ಕೆಲವು ಕಡೆ ರೈತರು ಯುಗಾದಿಯಂದು ಮೊದಲ ಬೇಸಾಯ ಮಾಡುತ್ತಾರೆ. ಹೊಲಕ್ಕೆ ಹೋಗಿ ಒಂದೆರಡು ಸುತ್ತು ಉಳುಮೆ ಮಾಡಿ ಮರಳುತ್ತಾರೆ.