ಈಗ ಮಾರುಕಟ್ಟೆಗಳಲ್ಲಿ ಹಣ್ಣಿನ ರಾಜನ ಕಾರುಬಾರು. ಎಲ್ಲಾ ಕಡೆ ಮಾವಿನ ವ್ಯಾಪಾರ ಜೋರಾಗಲಿದೆ. ವಿವಿಧ ಜಾತಿ, ಬಣ್ಣ, ಬಗೆಬಗೆಯ ಸುವಾಸನೆ ಮತ್ತು ಬೇರೆ ಬೇರೆ ರುಚಿಯ ಮಾವು ದೊರೆಯುತ್ತದೆ. ಅವುಗಳಲ್ಲಿ ಯಾವುದನ್ನು ಕೊಂಡುಕೊಳ್ಳೋದು ಅನ್ನೋ ಗೊಂದಲ ಸಹಜ.
ಹಾಗಾಗಿ ಮಾವು ಕೊಳ್ಳುವ ಮುನ್ನ ಅದರ ಬಗ್ಗೆ ಸಾಕಷ್ಟು ಮಾಹಿತಿ ನಿಮಗಿರಬೇಕು. ಅತ್ಯಂತ ಸ್ವಾದಿಷ್ಟ ಮಾವಿನ ಹಣ್ಣುಗಳನ್ನು ಕೊಳ್ಳಲು ಟಿಪ್ಸ್ ಇಲ್ಲಿದೆ.
ಪರಿಮಳ : ಮಾವಿನ ಹಣ್ಣು ತಾಜಾ ಇದೆಯೋ ಇಲ್ವೋ ಅನ್ನೋದನ್ನ ವಾಸನೆ ನೋಡಿ ಪತ್ತೆ ಮಾಡಬಹುದು. ಬೇರೆ ಬೇರೆ ತಳಿಯ ಹಣ್ಣುಗಳಿಗೆ ಅದರದ್ದೇ ಆದ ವಿಶಿಷ್ಟ ಸುವಾಸನೆ ಇರುತ್ತದೆ. ಕೆಲವೊಂದು ಸೌಮ್ಯ ವಾಸನೆ ಹೊಂದಿದ್ರೆ, ಇನ್ನು ಕೆಲವು ಸ್ಟ್ರಾಂಗ್ ಆಗಿರುತ್ತವೆ. ಕಾಂಡದ ಬುಡದಲ್ಲಿ ಸಿಹಿ ಮತ್ತು ಪಕ್ಕಾ ಹಣ್ಣಿನ ವಾಸನೆಯಿದ್ರೆ ಅದನ್ನು ನೀವು ಕೊಂಡುಕೊಳ್ಳಬಹುದು. ಆಲ್ಕೋಹಾಲಿಕ್ ಅಥವಾ ಹುಳಿ ವಾಸನೆ ಇದ್ರೆ ಮಾವಿನ ಹಣ್ಣು ಅತಿಯಾಗಿ ಮಾಗಿದೆ ಎಂದರ್ಥ.
ಸ್ಪರ್ಷ : ನಿಮ್ಮ ಬೆರಳಿನಿಂದ ಇಡೀ ಮಾವಿನ ಹಣ್ಣನ್ನು ನಿಧಾನವಾಗಿ ಹಿಂಡಿ ನೋಡಿ. ಮಾವು ಚೆನ್ನಾಗಿ ಮಾಗಿದ್ದರೆ, ಮೃದುವಾಗಿರುತ್ತದೆ. ಒಂದು ವಾರ ಇಟ್ಟು ತಿನ್ನಲು ಪ್ಲಾನ್ ಮಾಡಿದ್ದರೆ ಸ್ವಲ್ಪ ಗಟ್ಟಿ ಹಣ್ಣುಗಳನ್ನೇ ಆಯ್ಕೆ ಮಾಡಿಕೊಳ್ಳಿ.
ನೋಡಲು ಅಂದವಾಗಿರಲಿ : ಮಾವಿನ ಹಣ್ಣುಗಳನ್ನು ನೋಡಿದಾಕ್ಷಣ ಬಾಯಲ್ಲಿ ನೀರೂರುವಂತಿರಬೇಕು. ಕೊಬ್ಬಿದ, ಚೆನ್ನಾಗಿ ತಿರುಳಿರುವ ಹಣ್ಣುಗಳನ್ನು ಆಯ್ಕೆ ಮಾಡಿಕೊಳ್ಳಿ. ಹೆಚ್ಚು ಕಲೆ ಮತ್ತು ಗಾಯವಿರುವ ಹಣ್ಣು ಚೆನ್ನಾಗಿರುವುದಿಲ್ಲ. ಸಿಪ್ಪೆ ಬಾಡಿರುವ ಹಣ್ಣುಗಳನ್ನು ಯಾವುದೇ ಕಾರಣಕ್ಕೂ ಕೊಳ್ಳಬೇಡಿ. ಹಣ್ಣಿನ ಬಣ್ಣ ಮತ್ತು ಶೇಡ್ ಬೇರೆ ಬೇರೆಯಾಗಿರುತ್ತದೆ. ಕೇಸರಿ, ಕಿತ್ತಳೆ, ಕೆಂಪು, ಹಳದಿ, ಹಸಿರು ಹೀಗೆ ಬಣ್ಣ ಯಾವುದಾದ್ರೂ ಸಮಸ್ಯೆಯಿಲ್ಲ. ಆದ್ರೆ ಮಾವು ಕೊಳ್ಳುವಾಗ ನಿಮ್ಮ ಅನುಭವ ಕೆಲಸಕ್ಕೆ ಬರುತ್ತದೆ.
ಪರಿಚಯಸ್ಥರ ಬಳಿ ಖರೀದಿಸಿ : ವ್ಯಾಪಾರಿಗಳು ಎಳೆ ಕಾಯಿಗಳನ್ನೇ ತಂದು ಬೇಗ ಹಣ್ಣು ಮಾಡಿ ಮಾರಾಟ ಮಾಡ್ತಾರೆ. ಹಾಗಾಗಿ ಎಲ್ಲೆಂದರಲ್ಲಿ ಮಾವು ಖರೀದಿ ಮಾಡಬೇಡಿ, ನಿಮ್ಮ ಪರಿಚಯಸ್ಥ ವ್ಯಾಪಾರಿಗಳ ಬಳಿಯೇ ಕೊಂಡುಕೊಳ್ಳಿ. ತಾಜಾ, ಸಾವಯವ ಹಾಗೂ ನೈಸರ್ಗಿಕವಾಗಿ ಹಣ್ಣಾದ ಮಾವನ್ನೇ ಆಯ್ದುಕೊಳ್ಳಿ. ರತ್ನಗಿರಿಯ ಅಲ್ಫಾನ್ಸೊ, ಗಿರ್ ನ ಕೇಸರ್, ಮಲಿಹಾಬಾದ್ ನ ದಶೇರಿ ಬಹುತೇಕ ಎಲ್ಲಾ ಕಡೆ ಲಭ್ಯವಿರುವ ಅತ್ಯುತ್ತಮ ವೆರೈಟಿಗಳು.